ಮದ್ದೂರು: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ವೈಜ್ಞಾನಿಕ ದಿನಾಚರಣೆ ಅಂಗವಾಗಿ ಡಿ.29 ಹಾಗೂ 30 ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ 2023 ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‌ನ ತಾಲೂಕು ಅಧ್ಯಕ್ಷ ಡಿ.ಸಿ.ಮಹೇಂದ್ರ ತಿಳಿಸಿದರು.
ಪಟ್ಟಣದ ಪರಿಷತ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಗಣ್ಯರಿಗೆ ಸಮ್ಮೇಳನದಲ್ಲಿ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅದರಲ್ಲೂ ವಿಶೇಷವಾಗಿ ಮಂಡ್ಯ ದಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಿ.ಎಸ್.ಈರಯ್ಯ ಅವರಿಗೆ ಪ್ರಶಸ್ತಿ ದೊರಕಿರುವುದು ಹೆಮ್ಮೆ ವಿಚಾರ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ವಿಜ್ಞಾನ ಮತ್ತು ತಂತ್ರ ಜ್ಞಾನ ಸಚಿವ ಎನ್.ಎಸ್.ಬೋಸರಾಜು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಸೇರಿದಂತೆ ಇತರ ಗಣ್ಯರು ಆಗಮಿಸಲಿದ್ದಾರೆ ಎಂದರು.
ಸಭೆಯಲ್ಲಿ ಪರಿಷತ್‌ನ ಮಾರ್ಗದರ್ಶಕರಾದ ಎಂ.ಸಿ.ಬಸವರಾಜು, ತಾಲೂಕು ಉಪಾಧ್ಯಕ್ಷ ಶಂಕರಯ್ಯ, ಕಾರ್ಯದರ್ಶಿ ಕೆ.ಟಿ.ಶಿವಕುಮಾರ್ ಇದ್ದರು.