ತುಮಕೂರು: ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಒದಗಿಸುವ ಒತ್ತಡದಿಂದಾಗಿ ಮುಂದಿನ ಬಜೆಟ್‌ನಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಗೆ 2 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಕೊಟ್ಟಿರುವ ಭರವಸೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸೋಮವಾರ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 3ನೇ ರಾಜ್ಯ ಮಟ್ಟದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಪತ್ರಿಕಾ ವಿತರಕರು ಪತ್ರಿಕಾ ವೃತ್ತಿಯ ಅವಿಭಾಜ್ಯ ಅಂಗವಾಗಿದ್ದು ಸವಲತ್ತುಗಳು, ಪ್ರಶಸ್ತಿಗಳ ವಿಚಾರ ಬಂದಾಗ ಪತ್ರಿಕಾ ವಿತರಕರು ಹೊರಗೇ ಉಳಿದು ಬಿಡುತ್ತಾರೆ. ಹಾಗಾಗಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿಯಲ್ಲು ಪತ್ರಿಕಾ ವಿತರಿಕರಿಗೆ ಪಾಲು ಸಿಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನಿ ಕೈಗೊಳ್ಳುವ ಭರವಸೆಯಿತ್ತರು.
ಸಹಕಾರ ಸಂಘ ಸ್ಥಾಪಿಸಿ : ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಡಿ ವಿತರಕರ ಸಹಕಾರ ಸಂಘವನ್ನು ಸ್ಥಾಪಿಸಿದರೆ ಆರ್ಥಿಕ ನೆರವು ಪಡೆಯಬಹುದು. ಜತೆಗೆ ಆರೋಗ್ಯ ರಕ್ಷಣೆ ಸೇರಿ ನಾನಾ ರೀತಿಯ ಸಹಕಾರ ಮತ್ತು ನೆರವುಗಳು ಒದಗಿ ಬರುತ್ತವೆ. ಈ ಬಗ್ಗೆ ಸಂಘದ ಪದಾಧಿಕಾರಿಗಳು ಗಂಭೀರವಾಗಿ ಚಿಂತನೆ ನಡೆಸುವಂತೆ ಪ್ರಭಾಕರ್ ಸಲಹೆ ನೀಡಿದರು.
ವಿತರಕರಿಗೆ ‘ಸಹಾಯಹಸ್ತ’ : ಪತ್ರಿಕಾ ವಿತರಕರಿಗೆ ಖಾಸಗಿ ಸಹಭಾಗಿತ್ವದಡಿ ‘ಸಹಾಯಹಸ್ತ’ ಯೋಜನೆ ಜಾರಿ ತರುವ ಮೂಲಕ ಅವರ ಆರೋಗ್ಯ, ಶಿಕ್ಷಣ, ಉದ್ಯೋಗ ಭದ್ರತೆ ಒದಗಿಸುವ ಕಾರ್ಯವಾಗಬೇಕು ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಹೇಳಿದರು.
ರಾಜ್ಯದಲ್ಲಿ 75 ಸಾವಿರ ಪತ್ರಿಕೆ ಹಂಚುವರಿದ್ದಾರೆ. ಸೂರ್ಯ ಹುಟ್ಟುವುದು ತಡವಾಗಬಹುದು. ಆದರೆ, ಪತ್ರಿಕೆ ಹಾಕುವ ಹುಡುಗ ತಡಮಾಡುವುದಿಲ್ಲ. ಹಾಗಾಗಿ, ದೊಡ್ಡ ದೊಡ್ಡ ಕಂಪನಿಗಳ ಸಿಎಸ್‌ಆರ್ ನಿಧಿಯಡಿ ಪತ್ರಿಕಾ ವಿತರಕರಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ಮಾಧ್ಯಮ ಸಂಸ್ಥೆಗಳು ಪ್ರಯತ್ನ ಮಾಡಬೇಕು. ಆ ಮೂಲಕ ಪತ್ರಿಕೆ ಹಂಚುವ ಹುಡುಗನಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂದರು.
ಸಿದ್ದರಬೆಟ್ಟ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪತ್ರಿಕೋದ್ಯಮಿ ಎಸ್.ನಾಗಣ್ಣ, ಹಿರಿಯ ಪತ್ರಕರ್ತರಾದ ಬಿ.ವಿ. ಮಲ್ಲಿಕಾರ್ಜುನಯ್ಯ, ಸೊಗಡುವೆಂಕಟೇಶ್, ಚಿ.ನಿ.ಪುರುಷೋತ್ತಮ್, ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ, ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ಅಧ್ಯಕ್ಷ ಚೆಲುವರಾಜ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.