ಬೆಂಗಳೂರು: ಪರಿಸರ ಸಂರಕ್ಷಣೆ ಮಾಡಬೇಕು, ಸಸಿ ನೆಡಬೇಕು, ಮಣ್ಣಿನ ಸಂವರ್ಧನೆ ಮಾಡಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಎಷ್ಟು ಶ್ರಮ ಹಾಕಬೇಕು, ಎಷ್ಟು ಫಲಿತಾಂಶ ಲಭಿಸುತ್ತದೆ ಎಂದು ಯುವಕರಿಗೆ ಮನಮುಟ್ಟುವಂತೆ ವಿವರಿಸುವಲ್ಲಿ ಈಶ ಫೌಂಡೇಷನ್‌ನ ಸದ್ಗುರು ಮುಂಚೂಣಿಯಲ್ಲಿರುತ್ತಾರೆ.
ನೆಲದ ಮೇಲಿನಿಂದ 39 ಇಂಚಿನವರೆಗಿನ ಮಣ್ಣಿನಲ್ಲೇ ಜಗತ್ತಿನ ಶೇಕಡ 89 ಜೀವರಾಶಿಗಳು ವಾಸಿಸುತ್ತವೆ. ಸಮುದ್ರದಷ್ಟು ನೀರನ್ನು ಹಿಡಿದಿಡುವ ಸಾಮರ್ಥ್ಯ ಈ ಮಣ್ಣಲ್ಲಿದೆ. ಈ ಮಣ್ಣು ಸಂವರ್ಧನೆ ಆಗಬೇಕು ಎಂದರೆ ಮರದ ಎಲೆಗಳು ಉದುರಿ ಕರಗಬೇಕು. ಎಲೆಗಳು ಉದುರಬೇಕು ಎಂದರೆ ರೈತರ ಜಮೀನಿನಲ್ಲಿ ಮರಗಳಿರಬೇಕು. ಅದಕ್ಕೆ ಮರ ಕೃಷಿ ಮಾಡಬೇಕು ಎನ್ನುತ್ತ, ಕಾವೇರಿ ಕೂಗು ಅಭಿಯಾನದ ಮಹತ್ವವನ್ನು ಸದ್ಗುರು ವಿವರಿಸಿದರು.
ಬಯಲು ಜಮೀನಿನಲ್ಲಿ ಬೆಳೆದದ್ದಕ್ಕಿಂತಲೂ, ಮರದ ನಡುವೆ ಜಮೀನಿನಲ್ಲಿ ಬೆಳೆದ ಅರಿಶಿಣ ಉತ್ತಮ ಗುಣಮಟ್ಟ ಹೊಂದಿರುತ್ತದೆ, ಹೆಚ್ಚು ಬೆಲೆಗೆ ಮಾರಾಟ ಆಗುತ್ತದೆ ಎಂಬುದು ರೈತರಿಗೆ ತಿಳಿದೇ ಇಲ್ಲ. ಈ ಎಲ್ಲ ವಿಚಾರವನ್ನೂ ಬೆಂಗಳೂರಿನಲ್ಲಿ ಭಾನುವಾರ ನಡೆದ ವಿಶ್ವ ಅರಣ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಿಳಿಸಿದರು.