ಕೋಲಾರ: ಪಾರದರ್ಶಕ ವಹಿವಾಟಿಗಾಗಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮೈಕ್ರೋ ಎಟಿಎಂಗಳ ಬಳಕೆಗೆ ನಿರ್ಧರಿಸಲಾಗಿದ್ದು, 3 ತಿಂಗಳೊಳಗೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.
ದೊಡ್ಡಹಸಾಳದಲ್ಲಿ ಶನಿವಾರ ಡಿಸಿಸಿ ಬ್ಯಾಂಕಿನಿಂದ ಕೋಲಾರ ದಕ್ಷಿಣ ಕಸಬಾ ಎಸ್‌ಎಫ್‌ಸಿಎಸ್ ಆಶ್ರಯದಲ್ಲಿ 38 ಮಹಿಳಾ ಸಂಘಗಳಿಗೆ 1.5 ಕೋಟಿ ರೂ. ಸಾಲ ವಿತರಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೈಕ್ರೋ ಎಟಿಎಂ ಅಳವಡಿಕೆಯಿಂದ ಮಹಿಳೆಯರು, ರೈತರು ಸ್ಥಳೀಯ ಎಸ್‌ಎಫ್‌ಸಿಎಸ್‌ಗಳಲ್ಲೇ ಉಳಿತಾಯ ಖಾತೆ ತೆರೆದು ದೈನಂದಿನ ವಹಿವಾಟು ನಡೆಸಬಹುದಾಗಿದೆ. ಸ್ಥಳದಲ್ಲೇ ರಸೀದಿ ಸಿಗುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ, ಗ್ರಾಹಕರು ಪ್ರಯೋಜನ ಪಡೆಯಬೇಕು ಎಂದರು.
ಬಡ್ಡಿರಹಿತ ಸಾಲ ನೀಡುವ ಬ್ಯಾಂಕಿನಲ್ಲೇ ಠೇವಣಿ ಇಡಿ, ಕೈಗೆಟಕುವ ಠೇವಣಿಯನ್ನು ಒಳಗೊಂಡ ಶ್ರೀಲಕ್ಷ್ಮೀ ಬಾಂಡ್‌ಗಳನ್ನು ಹೊರ ತಂದಿದ್ದು, ಇದರ ಪ್ರಯೋಜನ ಪಡೆಯಿರಿ ಎಂದರು.
ಶಾಸಕ ಕೆ.ಶ್ರೀನಿವಾಸಗೌಡ ಸಾಲ ವಿತರಿಸಿ ಮಾತನಾಡಿ, ಡಿಸಿಸಿ ಬ್ಯಾಂಕ್ ದಿವಾಳಿಯಿಂದ ಪಾರಾದ ಮೇಲೆ 1500 ಕೋಟಿ ರೂ. ಸಾಲ ವಿತರಣೆ ಮಾಡಿರುವುದು ದೊಡ್ಡ ಸಾಧನೆ. ಬ್ಯಾಂಕ್ ಬಗ್ಗೆ ನನಗೂ ಅನುಮಾನವಿತ್ತು. ಗೋವಿಂದಗೌಡ ಮತ್ತವರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಎರಡೂ ಜಿಲ್ಲೆಗೆ ವರದಾನವಾಗಿದೆ ಎಂದು ಪ್ರಶಂಸಿದರು. ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಗೋವಿಂದಗೌಡರ ಇಚ್ಛಾಶಕ್ತಿ, ಬದ್ಧತೆಯಿಂದ ಗೊಬ್ಬರ, ಪಡಿತರಕ್ಕೆ ಸೀಮಿತವಾಗಿದ್ದ ಸೊಸೈಟಿಗಳು ಕೋಟಿಗಟ್ಟಲೆ ವ್ಯವಹಾರ ನಡೆಸುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆಂಜಿಮಲೆ ರಮೇಶ್, ದಕ್ಷಿಣ ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸ್, ಉಪಾಧ್ಯಕ್ಷ ಅಮ್ಮೇರಹಳ್ಳಿ ಶ್ರೀನಿವಾಸಪ್ಪ, ಸಿಇಒ ವೆಂಕಟೇಶ್, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀರಾಮರೆಡ್ಡಿ, ಸೊಸೈಟಿ ನಿರ್ದೇಶಕರಾದ ಟಿ.ಶ್ರೀನಿವಾಸ್, ಮುನಿವೆಂಕಟಪ್ಪ, ಎನ್.ಪ್ರಕಾಶ್, ಕೆ.ವೆಂಕಟೇಶಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ, ಸರೋಜಮ್ಮ, ಮುನಿಯಪ್ಪ, ಕೃಷ್ಣಪ್ಪ, ಚಿಕ್ಕಹಸಾಳ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.
ಡಿಸಿಸಿ ಬ್ಯಾಂಕಿನಲ್ಲಿ ಏನಾದರೂ ಲೋಪಗಳು ಗಮನಿಸಿದ್ದರೆ ಮುಕ್ತವಾಗಿ ತಿಳಿಸಿ, ಚರ್ಚೆ ಮೂಲಕ ಅನುಮಾನ ಬಗೆಹರಿಸಿಕೊಳ್ಳಿ. ಸತ್ಯ ಅರಿಯದೆ ಆರೋಪ ಮಾಡುವುದರಿಂದ ಬ್ಯಾಂಕ್ ಮುನ್ನಡೆಸಲು ಕಷ್ಟವಾಗುತ್ತದೆ. ಬಡವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ನಾಗನಾಳ ಸೋಮಣ್ಣ, ನಿರ್ದೇಶಕರು, ಡಿಸಿಸಿ ಬ್ಯಾಂಕ್