ಸೊರಬ ಪಟ್ಟಣದ ಹಿರೇಶಕುನ ಗ್ರಾಮದಲ್ಲಿ ಖಾಸಗಿ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರ.  
ಜಿಲ್ಲೆ

37ಕ್ಕೂ ಹೆಚ್ಚು ಅಂಗನವಾಡಿಗಳು ಶಿಥಿಲ

ಶಿವಪ್ಪ ಹಿತ್ಲರ್ ಸೊರಬ

ಅಂಗನವಾಡಿ ಮಕ್ಕಳ ಕಲಿಕೆಗೆ ಅಗತ್ಯವಿರುವ ಮೂಲ ಸೌಕರ್ಯಗಳಲ್ಲಿ ಕಟ್ಟಡ ಬಹಳ ಮುಖ್ಯ. ಆದರೆ ತಾಲೂಕಿನಲ್ಲಿ ಸ್ವಂತ ಕಟ್ಟಡ ಹಾಗೂ ನಿವೇಶನ ಇಲ್ಲದೆ ಖಾಸಗಿ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿದ್ದು ಬಹಳಷ್ಟು ಅವ್ಯವಸ್ಥೆಗಳಿಂದ ಕೂಡಿವೆ.

ಅನುದಾನ ಇದ್ದರೂ ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ ಕೆಲವು ಕಟ್ಟಡಗಳು ಸೊರಗುತ್ತಿವೆ. ಮತ್ತೆ ಕೆಲವು ಶಿಥಿಲಗೊಂಡಿವೆ.

ಸೊರಬ ತಾಲೂಕಿನಲ್ಲಿರುವ 384 ಅಂಗನವಾಡಿಗಳಲ್ಲಿ 317 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. 18 ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಗುರುತಿಸಲಾಗಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿಲ್ಲ. ನಿವೇಶನ ಇಲ್ಲದೆ 34 ಅಂಗನವಾಡಿ ಕೇಂದ್ರಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ. ಇವುಗಳಲ್ಲಿ ಮಕ್ಕಳಿಗೆ ಸರಿಯಾದ ಮೂಲ ಸೌಕರ್ಯವಿಲ್ಲದೆ ಆಟೋಟ ಇನ್ನಿತರ ಚಟುವಟಿಕೆಗಳಿಗೆ ಅವಕಾಶ ಇಲ್ಲದಂತಾಗಿದೆ. ಬಹುತೇಕ ಅಂಗನವಾಡಿ ಕಟ್ಟಡಗಳು ಹೆಂಚಿನ ಮನೆಗಳಾಗಿವೆ. ಸರ್ಕಾರಕ್ಕೆ ಸೇರಿದ 37ಕ್ಕೂ ಹೆಚ್ಚು ಅಂಗನವಾಡಿಗಳು ಶಿಥಿಲಾವಸ್ಥೆ ತಲುಪಿವೆ. ಇವುಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ಅನುದಾನದ ಅವಶ್ಯಕತೆ ಇದೆ.

ಕಾಮಗಾರಿ ನನೆಗುದಿಗೆ

ಅಂಗನವಾಡಿಗಳಿಗೆ ಕಾಂಪೌಂಡ್ ಇದ್ದು ಎಲ್ಲ ರೀತಿಯ ಸುರಕ್ಷತೆ ಇರುವ 135 ಅಂಗನವಾಡಿಗಳನ್ನು ತಕ್ಷಮ ಅಂಗನವಾಡಿಗಳು ಎಂದು ಗುರುತಿಸಿ ಅಲ್ಲಿಯ ಮಕ್ಕಳಿಗೆ ಕಲಿಕಾ ಟಿವಿಯನ್ನು ಅಳವಡಿಸಲಾಗಿದೆ. ಉಳಿದ ಕೇಂದ್ರಗಳ ಮಕ್ಕಳಿಗೂ ಕಟ್ಟಡ, ಕಾಂಪೌಂಡ್ ಸೇರಿದಂತೆ ಹಲವು ಸೌಲಭ್ಯ ಒದಗಿಸಬೇಕಿದೆ. ಪ್ರಗತಿಯಲ್ಲಿರುವ ಎಣ್ಣೆಕೊಪ್ಪ ಗೊಲ್ಲರ ತಾಂಡ, ಕಾನಹಳ್ಳಿ, ತಾಳಗೊಪ್ಪ, ಸಾರೇಕೊಪ್ಪ, ಬಾಸೂರು, ನಿಸರಾಣಿ ಸೇರಿದಂತೆ 15ಕ್ಕೂ ಹೆಚ್ಚು ಅಂಗನವಾಡಿಗಳ ಕಟ್ಟಡ ಕಾಮಗಾರಿಗಳನ್ನು ಕಳೆದ ಎರಡು ವರ್ಷದಿಂದ ಪ್ರಗತಿ ಎಂದು ತೋರಿಸಲಾಗುತ್ತಿದೆ. ಆದರೆ ಅನುದಾನ ಇದ್ದರೂ ಕಾಮಗಾರಿ ನನೆಗುದಿಗೆ ಬಿದ್ದಿವೆ. ಇನ್ನೂ 34 ಅಂಗನವಾಡಿ ಕೇಂದ್ರಗಳಿಗೆ ತುರ್ತಾಗಿ ನಿವೇಶನ ಗುರುತಿಸಬೇಕು.

ಅಭಿವೃದ್ಧಿಗೆ ಒತ್ತು ನೀಡಿ

ಅಂಗನವಾಡಿ ಕೇಂದ್ರಗಳು ಕಟ್ಟಡ, ನಿವೇಶನ, ಕಾರ್ಯಕರ್ತೆಯರ ಸಮಸ್ಯೆ, ಮಕ್ಕಳ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿವೆ. ಸರ್ಕಾರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮೂಲ ಸೌಕರ್ಯ ಒದಗಿಸಬೇಕಿದೆ.

ಮಕ್ಕಳ ಸಂಖ್ಯೆ ಗಣನೀಯ ಕಡಿಮೆ

ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆಯರ ನೇಮಕಾತಿ ಆಗಬೇಕು. 384 ಕಾರ್ಯಕರ್ತೆಯರಲ್ಲಿ 8 ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರಿಲ್ಲ. ಈ 8 ಕೇಂದ್ರಗಳಿಗೆ ಬೇರೆ ಕೇಂದ್ರದಿಂದ ನಿಯೋಜನೆ ಮಾಡಲಾಗಿದೆ. 344 ಸಹಾಯಕಿಯರಲ್ಲಿ ಮಕ್ಕಳ ಲಾಲನೆ ಪಾಲನೆ ಮತ್ತು ಮಕ್ಕಳನ್ನು ಕರೆ ತರಲು 40 ಸಹಾಯಕಿಯರ ಕೊರತೆ ಇದೆ. ಇನ್ನೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಈ ಬೆಳವಣಿಗೆಗಳ ನಡುವೆ ಬಹಳಷ್ಟು ಪಾಲಕರ ಆಂಗ್ಲಭಾಷೆಯ ವ್ಯಾಮೋಹದಿಂದ ಅಂಗನವಾಡಿಗೆ ಮಕ್ಕಳನ್ನು ದಾಖಲಿಸುವ ಸಂಖ್ಯೆ ಕಳೆದ 10 ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.

2019ರಲ್ಲಿ 6,443 ಮಕ್ಕಳು ಅಂಗನವಾಡಿಗಳಿಗೆ ದಾಖಲಾಗಿದ್ದರು. ನಂತರದಲ್ಲಿ ಪ್ರತಿವರ್ಷ ದಾಖಲಾತಿ ಪ್ರಮಾಣ ಕಡಿಮೆ ಆಗುತ್ತಿದೆ. 2025ರಲ್ಲಿ 4,848 ಮಕ್ಕಳು ದಾಖಲಾಗುವ ಮೂಲಕ ಬಹಳಷ್ಟು ಇಳಿಕೆ ಕಂಡಿದೆ.

ನೂತನ ಕೇಂದ್ರಗಳ ಆರಂಭಕ್ಕೆ ಸಿದ್ಧತೆ

ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ತಾಲೂಕಿನ ಆಯ್ದ ಕೇಂದ್ರಗಳಾದ ಶಿಗ್ಗಾ ಕೇಂದ್ರ-1, ಪಟ್ಟಣದ ಕೆಇಬಿ ಕಾಲನಿ, ಚಿಕ್ಕ ಇಡಗೋಡು ಕೇಂದ್ರ- 1, ಕುಪ್ಪಗಡ್ಡೆ ಕೇಂದ್ರ- 3, ಅಂಡಿಗೆ ತಿಮ್ಮಾಪುರ, ಬೆಲವಂತನ ಕೊಪ್ಪ, ಕಡಸೂರು, ಚಂದ್ರಗುತ್ತಿ ಕೇಂದ್ರ-2, ಸಾಬಾರ, ಜಡೆಸಾಲಿಗೆ ಸೇರಿದಂತೆ 12 ಕೇಂದ್ರಗಳಲ್ಲಿ ನೊತನವಾಗಿ ಕೇಂದ್ರ ಆರಂಭಿಸಲು ಸಿದ್ಧತೆ ನಡೆದಿದೆ.

ಸೊರಬ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಿರುವ ಕಟ್ಟಡ, ನಿವೇಶನ, ಶಿಥಿಲಗೊಂಡಿರುವ ಅಂಗನವಾಡಿ ಕಟ್ಟಡಗಳ ಬಗ್ಗೆ ಮೇಲಕಾರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ದೇನ್ಯಾನಾಯ್ಕಾ, ಶಿಶು ಅಭಿವೃದ್ಧಿ ಯೋಜನಾ ಅಕಾರಿ, ಸೊರಬ