ನೇಸರಗಿ: ಸಮೀಪದ ಮುರ್ಕಿಬಾವಿ ಗ್ರಾಮದಲ್ಲಿ ಏ.2 ರಿಂದ 7ರ ವರೆಗೆ ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹಾಗೂ ಪೂರ್ಣಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸದ್ಗುರು ಸಿದ್ಧಾರೂಢರ 37ನೇ ವೇದಾಂತ ಪರಿಷತ್ ಹಾಗೂ ರಥೋತ್ಸವ ಜರುಗಲಿವೆ.
ಏ.2ರಂದು ಸದ್ಗುರು ಸಿದ್ಧಾರೂಢರು, ಗುರುನಾಥರೂಢರ ಮೂರ್ತಿಗಳಿಗೆ, ಮುಕ್ತಾನಂದ ಭಾರತಿ ಪರಮಹಂಸರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಹಾಪೂಜೆ, ಪ್ರಣವ ಧ್ವಜಾರೋಹಣ ನೆರವೇರಲಿದೆ.ಏ.4ರಂದು ಗ್ರಾಮದೇವಿ ಉಡಿ ತುಂಬುವುದು, ತೇರಿನ ಕಳಸಾರೋಹಣ ಜರುಗಲಿದೆ. ಏ.6 ರಂದು ಸಿದ್ಧಾರೂಢರ ಪಲ್ಲಕ್ಕಿ ಉತ್ಸವ, ರಾಮನವಮಿ ನಿಮಿತ್ತ ಸದ್ಗುರು ಸಿದ್ಧಾರೂಢರ ತೊಟ್ಟಿಲೋತ್ಸವ, ಸಾಮೂಹಿಕ ವಿವಾಹ ಜರುಗಲಿವೆ.
ರಾತ್ರಿ 9 ಕ್ಕೆ ಶ್ರೀ ಸಿದ್ಧಾರೂಢರ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರತಿ ನಿತ್ಯ ರಾತ್ರಿ 10 ಕ್ಕೆ ಡಾ.ಶಿವಾನಂದ ಭಾರತಿ ಸ್ವಾಮೀಜಿ ತುಲಾಭಾರ, ಕನಕ ಕಿರೀಟ ಮಹಾಪೂಜೆ ಜರುಗಲಿದೆ. ಏ.7ರಂದು ಸಿದ್ಧಾರೂಢರ ಕೌದಿಪೂಜೆ, ಡಾ.ಶಿವಾನಂದ ಭಾರತಿ ಸ್ವಾಮೀಜಿ ಬೆಳ್ಳಿ ತೊಟ್ಟಿಲೋತ್ಸವ ಹಾಗೂ ಕೌದಿ ಪೂಜೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.