ವಿಜಯಪುರ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕಾನಿಪ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಅಧ್ಯಕ್ಷತೆವಹಿಸಿ ಮಾತನಾಡಿದರು.  
ಜಿಲ್ಲೆ

ವಿಜಯಪುರದಲ್ಲಿ ಪತ್ರಕರ್ತರ ೩೭ನೇ ರಾಜ್ಯ ಸಮ್ಮೇಳನ, ನವೆಂಬರ್‌ನಲ್ಲಿ ಆಯೋಜನೆಗೆ ನಿರ್ಧಾರ : ಕಾನಿಪ ಸಂಘದ ಅಧ್ಯಕ್ಷ ಶಿವಾನಂದ ತಗಡೂರ

ವಿಜಯಪುರ : ಈ ಬಾರಿ ಐತಿಹಾಸಿಕ ನಗರ ವಿಜಯಪುರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ೩೭ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಆಯೋಜನೆಗೆ ನಿರ್ಧರಿಸಲಾಗಿದ್ದು, ಅದಕ್ಕೆ ಈಗಿನಿಂದಲೇ ಪೂರ್ವ ಸಿದ್ಧತೆ ಕೈಗೊಳ್ಳುವಂತೆ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮುಂಬರುವ ನವೆಂಬರ್ ತಿಂಗಳಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಪ್ರಥಮ ಬಾರಿ ವಿಜಯಪುರ ಜಿಲ್ಲೆಗೆ ವಹಿಸಿಕೊಟ್ಟಿರುವುದು ಜಿಲ್ಲೆಯ ಎಲ್ಲ ಪತ್ರಕರ್ತರಿಗೆ ತುಂಬಾ ಹರ್ಷ ಹಾಗೂ ಸಂಭ್ರಮ ತಂದಿದೆ. ಈಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಸಮ್ಮೇಳನದ ಸಂಪೂರ್ಣ ಯಶಸ್ವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಹಿಂದಿನ ನನ್ನ ಅವಽಯ ಮೂರು ವರ್ಷಗಳಲ್ಲಿ ಮೈಸೂರಿನ ಸುತ್ತೂರು, ಮಂಗಳೂರು ಹಾಗೂ ಕಲಬುರಗಿಯಲ್ಲಿ ಮೂರು ರಾಜ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿವೆ. ಇದೊಂದು ಐತಿಹಾಸಿಕ ದಾಖಲೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಮೂರು ಸಮ್ಮೇಳನಗಳ ಸ್ವರೂಪ ಒಂದಕ್ಕಿಂತ ಒಂದು ಭಿನ್ನ-ವಿಭಿನ್ನವಾಗಿತ್ತು. ಕೋವಿಡ್ ಭಯ ಹಾಗೂ ಅಪಪ್ರಚಾರಗಳ ನಡುವೆಯೂ ನಿರೀಕ್ಷೆ ಮೀರಿ ರಾಜ್ಯದ ಉದ್ದಗಲಗಳಿಂದ ಪತ್ರಕರ್ತರು ಆಗಮಿಸಿ ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದಾರೆ. ಅದೇ ರೀತಿ ಪತ್ರಕರ್ತರ ೩೭ನೇ ರಾಜ್ಯ ಸಮ್ಮೇಳನ ವಿಜಯಪುರದಲ್ಲಿ ಒಂದು ಮಾದರಿ ಸಮ್ಮೇಳನವಾಗಿ ಇಡೀ ರಾಜ್ಯಕ್ಕೆ ಒಂದು ಉತ್ತಮ ಸಂದೇಶ ರವಾನೆಯಾಗಬೇಕು ಎಂದರು.

ಕಾನಿಪ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ.ಚೂರಿ, ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನರೆಡ್ಡಿ ಗೊಂದಿ, ಡಿ.ಬಿ.ವಡವಡಗಿ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ನಾಮನಿರ್ದೇಶಿತ ಸದಸ್ಯ ಕೆ.ಕೆ.ಕುಲಕರ್ಣಿ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಫಿರೋಜ್ ರೋಜಿನದಾರ, ಪ್ರಕಾಶ ಬೆಣ್ಣೂರ, ಕಾರ್ಯದರ್ಶಿಗಳಾದ ಶಕೀಲ ಬಾಗಮಾರೆ, ಮಲ್ಲು ಕೆಂಭಾವಿ, ಖಜಾಂಚಿ ರಾಹುಲ ಆಪ್ಟೆ, ಸಲಹಾ ಸಮಿತಿ ಸದಸ್ಯರಾದ ಜಿ.ಎಸ್.ಕಮತರ, ದೇವೇಂದ್ರ ಹೆಳವರ, ಅಶೋಕ ಯಡಳ್ಳಿ, ರಾಜು ಕೊಂಡಗೂಳಿ ಇನ್ನಿತರರು ಪಾಲ್ಗೊಂಡಿದ್ದರು.