ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾದ ೩೭೧(ಜೆ) ಜಾರಿಯಾಗಿ ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಅದರ ಫಲ ಈ ಭಾಗದ ಜನರಿಗೆ ಸಮರ್ಪಕವಾಗಿ ತಲುಪಿಲ್ಲ. ಬರಿ ಭಾಷಣಗಳೇ ನಡೆಯುತ್ತಿದ್ದು, ಇದುವರೆಗೆ ಎಷ್ಟು ಹಣ ಖರ್ಚು ಮಾಡಲಾಗಿದೆ, ಎಷ್ಟು ಹುದ್ದೆ ಸೃಜಿಸಲಾಗಿದೆ ಎಂಬುದು ಸೇರಿ ಎಲ್ಲ ವಿಷಯಗಳ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಯುವ ಹೋರಾಟ ಸಮಿತಿ ಅಧ್ಯಕ್ಷ ಡಾ.ರಾಜು ಕುಳಗೇರಿ ಆಗ್ರಹಿಸಿದರು.
೩೭೧ (ಜೆ) ಅನುಷ್ಠಾನ ಸಂಪುಟ ಉಪಸಮಿತಿ ರಚನೆಯಾಗಿ ಒಂದುವರೆ ವರ್ಷವಾಗಿದೆ. ನಮ್ಮದೇ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಮಿತಿ ಅಧ್ಯಕ್ಷರಾಗಿದ್ದು, ಒಂದುವರೆ ವರ್ಷವಾದರೂ ಸಮಿತಿಯ ಕಾರ್ಯಚಟುವಟಿಕೆಗಳಲ್ಲಿ ಕಿಂಚಿತ್ತು ಅಭಿವೃದ್ಧಿ ಕಾಣುತ್ತಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಎಂಬಿಬಿಎಸ್ ಸೀಟ್‌ಗಳಲ್ಲಿ ಲಾಭವಾಗಿದೆ ಎನ್ನುತ್ತ ಇತರೆ ಕ್ಷೇತ್ರಗಳಲ್ಲಿನ ಅಧೋಗತಿಯನ್ನು ಮರೆಮಾಚಲಾಗುತ್ತಿದೆ. ಕೈಗಾರಿಕೆ, ಕೃಷಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ ಸೇರಿ ಯಾವುದೇ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈ ಭಾಗದ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಯಾಗಿದ್ದು, ವರ್ಷಕ್ಕೆ ಐದು ಸಾವಿರ ಕೋಟಿ ರೂ. ಅನುದಾನ ಎನ್ನಲಾಗುತ್ತಿದೆ. ಆದರೆ ಅದರ ಬಳಕೆ ಎಷ್ಟಾಗುತ್ತಿದೆ. ಎಷ್ಟು ಬಂದಿದೆ, ಎಷ್ಟು ವಾಪಸ್ ಹೋಗಿದೆ ಎಂಬುದರ ಲೆಕ್ಕ ಪತ್ರವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಕೆಆರ್‌ಡಿಬಿಗೆ ಬರುವ ಅನುದಾನ ಹೆಚ್ಚುವರಿ ಹಣವೋ, ಅಥವಾ ರಾಜ್ಯ ಸರ್ಕಾರದಿಂದ ಎಲ್ಲ ಇಲಾಖೆಗಳಿಗೆ ಬರುವ ಸಾಮಾನ್ಯ ಬಜೆಟ್ ಹಣವೋ ಎಂಬುದರ ಬಗ್ಗೆ ಸ್ಪಷ್ಟತೆ ನೀಡಲಿ. ಕಕ ಭಾಗದಲ್ಲಿ ಇಲಾಖಾವಾರು ವಾರ್ಷಿಕ ಅನುದಾನ ಎಷ್ಟು ನೇರ ಸರ್ಕಾರದಿಂದ ಬರುತ್ತಿದೆ ಎಂಬುದರ ಮಾಹಿತಿಯೇ ಇಲ್ಲ. ಅಧಿಕಾರಿಗಳ ಬಳಿಯೂ ಸ್ಪಷ್ಟತೆ ಇಲ್ಲ. ಯಾವುದನ್ನು ಕೇಳಿದರೂ ಕೆಕೆಆರ್‌ಡಿಬಿ ಎಂದರೆ ಹೆಚ್ಚುವರಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ನಂಜುಡಪ್ಪ ವರದಿ ಪ್ರಕಾರ ವರ್ಷಕ್ಕೆ ೨ ಸಾವಿರ ಕೋಟಿ ರೂ. ಎಂಟು ವರ್ಷದವರೆಗೆ ೧೬ ಸಾವಿರ ಕೋಟಿ ಹೆಚ್ಚುವರಿ ವಿನಿಯೋಗಿಸಲು ಶಿಫಾರಸ್ಸು ಮಾಡಲಾಗಿದೆ. ಆದರೆ ಪ್ರಸ್ತುತ ಐದು ಸಾವಿರ ಕೋಟಿ ಎನ್ನುತ್ತಿದ್ದು, ಇದರ ಸ್ಪಷ್ಟತೆ ಇಲ್ಲ ಎಂದು ಹೇಳಿದರು.
ಹಣಮಂತ ಶೇರಿ ಮಾತನಾಡಿ, ನಮ್ಮ ಭಾಗದ ಶಾಸಕರಿಗೆ ೩೭೧ (ಜೆ) ಬಗ್ಗೆ ಅರಿವೇ ಇಲ್ಲ. ಅದರ ಬಗ್ಗೆ ಎಲ್ಲಿಯೂ ಮಾತನಾಡಲ್ಲ. ಕೆಕೆಆರ್‌ಡಿಬಿಗೆ ಸಮಯಕ್ಕೆ ಸರಿಯಾಗಿ ಕ್ರಿಯಾ ಯೋಜನೆಯೂ ಸಲ್ಲಿಸದಕ್ಕೆ ಅನುದಾನ ವಾಪಸ್ ಹೋಗಿದೆ. ಎಲ್ಲ ಶಾಸಕರು ಸರ್ಕಾರಕ್ಕೆ ಸೂಕ್ತ ಸಲಹೆ ನೀಡಿ, ಸಮರ್ಪಕ ಅನುಷ್ಠಾನ ಮಾಡಿಸಬೇಕು ಎಂದು ಆಗ್ರಹಿಸಿದರು.