ಬೀದರ್: ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಕೇಂದ್ರ ಸಂಘದ ಸಂಸ್ಥಾಪಕ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಮುಂದಾಳತ್ವದಲ್ಲಿ ಸಂಘದ ಪದಾಧಿಕಾರಿಗಳು ನಗರದಲ್ಲಿ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂಖಾನ್ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಕಾಯ್ದೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳದ ಕಾರಣ ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯ ದೊರಕುತ್ತಿಲ್ಲ ಎಂದು ಗಮನ ಸೆಳೆದರು.
15 ವರ್ಷಗಳಿಂದ ಸ್ಥಗಿತಗೊಂಡಿರುವ ಪ್ರೌಢಶಾಲಾ ಶಿಕ್ಷಕರಿಗೆ ಪದವಿಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ನೀಡಲಾಗುವ ಬಡ್ತಿ ಪ್ರಕ್ರಿಯೆ ಕೂಡಲೇ ಆರಂಭಿಸಬೇಕು.
ಈಗಾಗಲೇ ಆಯ್ಕೆ ಮಾಡಲಾದ ಎಲ್ಲ 128 ಶಿಕ್ಷಕರಿಗೆ ತಕ್ಷಣ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ಕೊಡಬೇಕು. ಪ್ರೌಢಶಾಲಾ ವಿಭಾಗವು ಪದವಿಪೂರ್ವ ಕಾಲೇಜುಗಳಿಂದ ಪ್ರತ್ಯೇಕವಾಗಿರುವ ಕಾರಣ ಮುಖ್ಯಶಿಕ್ಷಕ ಹುದ್ದೆ ಸೃಷ್ಟಿಸಬೇಕು ಎಂದು ಒತ್ತಾಯಿಸಿದರು.
ಸಂಘದ ದೇವಿಪ್ರಸಾದ್ ಕಲಾಲ್, ವೀರಭದ್ರಪ್ಪ ಚಟ್ನಳ್ಳಿ, ವೈಜಿನಾಥ ಸಾಳೆ, ಬಳವಂತರಾವ್ ರಾಠೋಡ್, ರವಿಕುಮಾರ ಕುಮ್ಮನೋರ, ಎಂ.ಡಿ. ಶಹಾಬೊದ್ದಿನ್, ಬಾಬರ್ ಹುಸೇನ್, ಸುಭಾಷ್ ಚೌಹಾಣ್, ವಿಜಯಕುಮಾರ ಗುನ್ನಳ್ಳಿ, ಗೋವಿಂದ ಪೂಜಾರಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಜ ಕಪಲಾಪುರೆ, ಸುರೇಶ ಟಾಳೆ ಇದ್ದರು.