ಚಿಕ್ಕಮಗಳೂರು: ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 370ನೇ ವಿಧಿಯನ್ನು ಪುನಃ ಜಾರಿಗೊಳಿಸುವುದಾಗಿ ಪಾಕಿಸ್ತಾನದ ಮಾಧ್ಯಮಕ್ಕೆ ಹೇಳಿಕೆ ನೀಡಿ ದಾಷ್ಟ್ರ್ಯ ತೋರಿಸುವ ಪಕ್ಷ ನಮ್ಮದಲ್ಲ. ದೇಶದ ಹಿತಕ್ಕಾಗಿ ಹೋರಾಡುವ ಪಕ್ಷ ನಮ್ಮದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹರಿಹಾಯ್ದರು. ಜನಸಂಘದ ಸಂಸ್ಥಾಪಕ ಶ್ಯಾಮ್‍ಪ್ರಸಾದ್ ಮುಖರ್ಜಿ ಅವರ ಸ್ಮೃತಿ ದಿನದ ಪ್ರಯುಕ್ತ ನಗರ ಹೊರವಲಯದ ಹಿರೇಮಗಳೂರು ಶಾಲಾ ಆವರಣದಲ್ಲಿ ಬುಧವಾರ ಬಿಜೆಪಿ ನಗರ ಘಟಕ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಮಾತನಾಡಿದರು.
ಕಾಂಗ್ರೆಸ್‍ನಿಂದ ದೇಶದ ಮಾನ ಹರಾಜು:
ಕಾಂಗ್ರೆಸ್ ಪಕ್ಷದ ಕ್ಲಬ್ ಹೌಸ್ ಸಭೆಯಲ್ಲಿ ಮತ್ತೆ 370ನೇ ವಿಧಿ ಜಾರಿಗೊಳಿಸುತ್ತೇವೆಂದು ಹೇಳಿದ್ದಾರೆ. ಆ ಕಾಲ ಜಾರಿಹೋಗಿದೆ. ಬಿಜೆಪಿ ಕೇವಲ ಚುನಾವಣೆಗಾಗಿ ರಾಜಕಾರಣ ಮಾಡುತ್ತಿಲ್ಲ. ಟೂಲ್‍ಕಿಟ್ ಮೂಲಕ ದೇಶದ ಮಾನ ಹರಾಜು ಹಾಕುವಂಥ ಪಾರ್ಟಿಯೂ ಅಲ್ಲ ಎಂದರು. ಉದಾತ್ತ ವ್ಯಕ್ತಿತ್ವದ ಡಾ.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಹೀನ ಕಾಲ ಆಗಿಹೋಯಿತು. ಅಂದು ಕಾಂಗ್ರೆಸ್ ಮಾಡಿದ ಎಲ್ಲ ಕುತಂತ್ರಗಳನ್ನೂ ದಕ್ಕಿಸಿಕೊಳ್ಳುತ್ತಿತ್ತು, ಇಂದು ನಡೆಯುವುದಿಲ್ಲ. ಕಾರಣ ಜನ ಜಾಗೃತರಾಗಿದ್ದಾರೆ. ಈಗ ಡಾ.ಅಂಬೇಡ್ಕರ್ ಸಂವಿಧಾನದ ಆಶಯ ಈಡೇರಿಸುವ ಕಾಲ. ಹಾಗಾಗಿ ಶ್ಯಾಮ್‍ಪ್ರಸಾದ್ ಮುಖರ್ಜಿ ಸ್ಮೃತಿ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು. ಬಿಜೆಪಿ ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್, ನಗರಸಭೆ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಎಚ್.ಡಿ.ತಮ್ಮಯ್ಯ, ಕವಿತಾ ಶೇಖರ್, ಬಿ.ರಾಜಪ್ಪ, ದೇವರಾಜ ಶೆಟ್ಟಿ, ಸೀತಾರಾಂ ಭರಣ್ಯ, ಬಿ.ರೇವನಾಥ್, ಕೇಶವಮೂರ್ತಿ ಇದ್ದರು.