ಜಿಲ್ಲೆ

ಹೊಸ ವೇತನಕ್ಕೆ 3,700 ದೇವಸ್ಥಾನ ನೌಕರರ ಹೋರಾಟ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೊಂಡು ಬರೋಬ್ಬರಿ ಎರಡು ವರ್ಷ ಕಳೆದರೂ ರಾಜ್ಯದ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಈ ವೇತನ ಭಾಗ್ಯ ಸಿಕ್ಕಿಲ್ಲ. 203 ಎ ಗ್ರೇಡ್ ಹಾಗೂ ಕೆಲ ಬಿ ಗ್ರೇಡ್ ದೇಗುಲಗಳ ನೌಕರರು ತಮಗೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತು ಪಡೆಯಲು ಹೋರಾಟಕ್ಕಿಳಿಯಬೇಕಾದ ಸ್ಥಿತಿ ನಿರ್ವಣವಾಗಿದೆ.

ರಾಜ್ಯದಲ್ಲಿ 203 -ಎ ಶ್ರೇಣಿ, 155- ಬಿ ಶ್ರೇಣಿ ಹಾಗೂ 34,142 -ಸಿ ಶ್ರೇಣಿ ದೇವಸ್ಥಾನಗಳಿವೆ. ಎ ಮತ್ತು ಬಿ ಶ್ರೇಣಿಯಲ್ಲಿ ಹೆಚ್ಚು ಆದಾಯವುಳ್ಳ ಕೆಲ ದೇವಸ್ಥಾನಗಳ ನೌಕರರಿಗೆ ಸರ್ಕಾರ 6ನೇ ವೇತನ ಆಯೋಗದ ಸೌಲಭ್ಯಗಳನ್ನು ಕಲ್ಪಿಸಬೇಕು. ಹಿಂದೆಲ್ಲ ವೇತನ ಆಯೋಗ ಜಾರಿಯಾಗಿ ಮೂರ್ನಾಲ್ಕು ತಿಂಗಳಲ್ಲೇ ಎಲ್ಲ ಸವಲತ್ತುಗಳು ದೊರೆಯುತ್ತಿದ್ದವು. ಆದರೆ, ಈ ಬಾರಿ ದೇವಸ್ಥಾನಗಳ ಆದಾಯ ಲೆಕ್ಕಾಚಾರ, ಮುಜರಾಯಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಹಳಬರು ಹಾಗೂ ಹೊಸ ನೌಕರರ ನಡುವಿನ ಹಗ್ಗ ಜಗ್ಗಾಟದಿಂದ 6ನೇ ವೇತನ ಆಯೋಗದ ಯಾವ ಅನುಕೂಲಗಳೂ ಈವರೆಗೆ ಲಭ್ಯವಾಗಿಲ್ಲ.

ಸವಲತ್ತಿಗೆ ಹಗ್ಗ ಜಗ್ಗಾಟ: ಈ ಹಿಂದೆಯೇ ವೇತನ ಶ್ರೇಣಿ ನಿಗದಿಯಾಗಿರುವ ಎ ವರ್ಗದ 1,111 ನೌಕರರು ಮತ್ತು ಬಿ ಶ್ರೇಣಿಯ ಕೆಲ ನೌಕರರಿಗೆ ಸಲವತ್ತು ಸಿಗಬೇಕು. ಜತೆಗೆ ಹತ್ತಿಪ್ಪತ್ತು ವರ್ಷ ಕಾಲ ಸಂಚಿತ ನಿಧಿಯಲ್ಲಿ ಅಲ್ಪ-ಸ್ವಲ್ಪ ಗೌರವಧನ ಪಡೆದು 2019ರಲ್ಲಿ ಸುಮಾರು 2,600 ನೌಕರರು ಕಾಯಂಗೊಂಡವರಿದ್ದಾರೆ. ಈ ನೌಕರರಿಗೆ ಇತ್ತೀಚೆಗೆ ಹೊಸ ವೇತನ ಶ್ರೇಣಿ ನಿಗದಿಯಾಗಿದೆ. ಹಾಗಾಗಿ 6ನೇ ವೇತನ ಆಯೋಗದ ಸವಲತ್ತು ಪಡೆಯುವ ವಿಚಾರದಲ್ಲಿ ಹಳಬರು ಮತ್ತು ಹೊಸಬರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ.

ಶೇ.35 ಬಳಕೆಗೆ ಅವಕಾಶ: ಧಾರ್ವಿುಕ ದತ್ತಿ ಇಲಾಖೆ ನಿಯಮದ ಪ್ರಕಾರ ದೇವಸ್ಥಾನದ ಆದಾಯದ ಶೇ.35 ಅನ್ನು ಮಾತ್ರ ನೌಕರರ ಸಂಬಳಕ್ಕೆ ವ್ಯಯಿಸಬೇಕಿದೆ. ಕಾರಣ ಹೊಸಬರಿಗೂ ಅವಕಾಶ ಕಲ್ಪಿಸಿದರೆ ವೆಚ್ಚ ಮಿತಿ ಹೆಚ್ಚಬಹುದೆಂಬ ಆತಂಕ ಹಳೆಯ ನೌಕರರದ್ದು. ಆದರೆ, ತಾವೂ ಹತ್ತಿಪ್ಪತ್ತು ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳ ಪಡೆದು ಕಾರ್ಯನಿರ್ವಹಿಸುತ್ತ ಬಂದಿದ್ದೇವೆ. ಹಾಗಾಗಿ ತಮಗೂ 6ನೇ ವೇತನ ಆಯೋಗದ ಪ್ರಯೋಜನ ಬೇಕು ಎಂಬುದು ಈ ವರ್ಗದ ನೌಕರರ ಒತ್ತಾಯ.

ರಾಜ್ಯದ ನಾಲ್ಕೈದು ದೇವಾಲಯಗಳ ಆಡಳಿತ ಮಂಡಳಿಗಳು ವಿವೇಚನಾಧಿಕಾರ ಬಳಸಿ ನೌಕರರಿಗೆ ಈಗಾಗಲೇ 6ನೇ ವೇತನ ಆಯೋಗದ ವೇತನ ಸವಲತ್ತು ಕಲ್ಪಿಸುತ್ತಿವೆ. ಈ ಸೌಲಭ್ಯ ಎಲ್ಲ ದೇವಸ್ಥಾನಗಳಿಗೂ ವಿಸ್ತರಿಸಬೇಕು ಎಂಬುದು ನೌಕರರ ಆಗ್ರಹ.

ನಾಳೆ ಧಾರ್ವಿುಕ ಪರಿಷತ್ ಸಭೆ: ರಾಜ್ಯ ಧಾರ್ವಿುಕ ಪರಿಷತ್ ಸಭೆ ಫೆ.27 ರಂದು ವಿಧಾನಸೌಧದಲ್ಲಿ ನಡೆಯಲಿದೆ. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಎ ಮತ್ತು ಬಿ ಶ್ರೇಣಿಯ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ 6ನೇ ವೇತನ ಆಯೋಗದ ಸವಲತ್ತು ಕಲ್ಪಿಸುವ, ತಸ್ತಿಕ್ ಹೆಚ್ಚಳ ಮಾಡುವ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ.

ತಸ್ತಿಕ್ ಹೆಚ್ಚಿಸಲು ಒತ್ತಡ: 34,255 ಸಿ ವರ್ಗದ ದೇವಸ್ಥಾನಗಳ ಅರ್ಚಕರಿಗೆ ಸರ್ಕಾರ ಪ್ರತಿ ತಿಂಗಳಿಗೆ 4 ಸಾವಿರ ರೂ. ತಸ್ತಿಕ್ ಹಣ ನೀಡುತ್ತದೆ. ಈ ಹಣ ಯಾವುದಕ್ಕೂ ಸಾಲದು. ತಸ್ತಿಕ್ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಸಿ ವರ್ಗದ ದೇವಸ್ಥಾನಗಳ ನೌಕರರು ಸರ್ಕಾರದ ಮುಂದಿಟ್ಟಿದ್ದಾರೆ.

ಆದಾಯ ವಿಚಾರದಲ್ಲಿ ಜಿಜ್ಞಾಸೆ

ಒಮ್ಮೆ 6ನೇ ವೇತನ ಆಯೋಗ ಜಾರಿಗೊಳಿಸಿ ಆದೇಶಿಸಿದರೆ ಹಿಂಪಡೆಯಲು ಆಗುವುದಿಲ್ಲ. ಹಾಗಾಗಿ ನೌಕರರಿಗೆ ಹೆಚ್ಚುವರಿಯಾಗಿ ನೀಡಬೇಕಾದ ಹಣವನ್ನು ದೇವಾಲಯಗಳ ಆದಾಯದಿಂದ ನಿರಂತರವಾಗಿ ಭರಿಸಲು ಸಾಧ್ಯವೇ? ಎಂಬ ಜಿಜ್ಞಾಸೆ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಶುರುವಾಗಿದೆ. ಜತೆಗೆ ಹಳಬರಿಗೆ ಮಾತ್ರ 6ನೇ ವೇತನ ಆಯೋಗದ ಸೌಲಭ್ಯ ನೀಡಬೇಕೇ? ಹೊಸದಾಗಿ ಕಾಯಂಗೊಂಡ ನೌಕರರಿಗೂ ವಿಸ್ತರಿಸಬೇಕೇ? ಎಂಬ ಚರ್ಚೆಯೂ ನಡೆಯುತ್ತಿದೆ.

ಅತೃಪ್ತಿ ಹೆಚ್ಚಳ?

ಆರ್ಥಿಕವಾಗಿ ಸದೃಢವಾಗಿರುವ ಕೆಲ ದೇವಸ್ಥಾನಗಳ ಆಡಳಿತ ಮಂಡಳಿಗಳು ತಮ್ಮ ನೌಕರರಿಗೆ 6ನೇ ವೇತನ ಆಯೋಗದ ಸವಲತ್ತು ಕಲ್ಪಿಸಬೇಕು. ಕೊಲ್ಲೂರು ದೇವಸ್ಥಾನದಲ್ಲಿ ಈಗಾಗಲೇ ಕೊಡಲಾಗಿದೆ. ನೌಕರರಿಗೆ ಕೊಡದೇ ಹೋದರೆ ಅತೃಪ್ತಗೊಳ್ಳುತ್ತಾರೆ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿವೆ.

ನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳ ನೌಕರರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ 6ನೇ ವೇತನ ಆಯೋಗದ ಸವಲತ್ತುಗಳನ್ನು ದೊರಕಿಸಿಕೊಡಬೇಕು. | ವೈ.ಟಿ. ಸುರೇಶ್ ಪಾರುಪತ್ತೆದಾರರು, ಶ್ರೀ ಕ್ಷೇತ್ರ ಯಡಿಯೂರು

| ವಿಲಾಸ ಮೇಲಗಿರಿ