ಸಿದ್ದಾಪುರದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಡಿಸಿ ನಲಿನ್ ಅತುಲ್ ಉದ್ಘಾಟಿಸಿದರು. ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸಿ ಕ್ಯಾ.ಮಹೇಶ್ ಮಾಲಗಿತ್ತಿ, ಎಡಿಸಿ ಸಿದ್ದರಾಮೇಶ್ವರ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಗ್ರಾಪಂ ಅಧ್ಯಕ್ಷೆ ಶಿವಗಂಗಾ, ಉಪಾಧ್ಯಕ್ಷ ಗಂಗಪ್ಪ ಇತರರಿದ್ದರು. 
ಜಿಲ್ಲೆ

367 ಕೋಟಿ ರೂ. ಕ್ರಿಯಾಯೋಜನೆ

ಡಿಸಿ ನಲಿನ್ ಅತುಲ್ ಮಾಹಿತಿ | ಜನರಿಂದ ಮನವಿಗಳ ಮಹಾಪೂರ

ಸಿದ್ದಾಪುರ: ಗ್ರಾಮದ ಎಪಿಎಂಸಿ ಆವರಣದಲ್ಲಿ ತಾಲೂಕು ಹಾಗೂ ಜಿಲ್ಲಾಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಜನ ಸ್ಪಂದನ ಕಾರ್ಯಕ್ರಮಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ದೊರೆಯಿತು.

ಜಿಲ್ಲಾಧಿಕಾರಿ ನಲಿನ್ ಅತುಲ್ ಉದ್ಘಾಟಿಸಿ ಮಾತನಾಡಿ, ಕೆಕೆಆರ್‌ಡಿಬಿಯಲ್ಲಿ 5 ಸಾವಿರ ಕೋಟಿ ರೂ.ಅನುದಾನವಿದೆ. ಕೊಪ್ಪಳ ಜಿಲ್ಲೆಗೆ ಈ ಬಾರಿ 367 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ರಾಜ್ಯ ಹಣಕಾಸಿನಿಂದ 150-200 ಕೋಟಿ ರೂ. ಅನುದಾನ ದೊರೆಯಲಿದೆ. 200-250 ಕೋಟಿ ರೂ. ವೆಚ್ಚದಲ್ಲಿ ಅಮೃತ್ ಕುಡಿಯುವ ನೀರು ಯೋಜನೆ ರೂಪಿಸಲಾಗಿದೆ. ಅಲ್ಲದೇ, ರಾಜ್ಯದ 5 ಗ್ಯಾರಂಟಿಗಳ ಪೈಕಿ ಎಲ್ಲದರಲ್ಲೂ ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೊಸ ಸರ್ಕಾರ ಬಂದ ನಂತರ ತಾಲೂಕು ಹಂತದಲ್ಲಿ ಸಿಇಒ, ಡಿಸಿ, ಎಸ್ಪಿ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಲು ಮುಖ್ಯಮಂತ್ರಿ ಸೂಚಿಸಿದ್ದರು. ಈಗ ಹೋಬಳಿ ಹಂತದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹಳ್ಳಿ ಭಾಗದಲ್ಲಿ ಕಾರ್ಯಕ್ರಮ ರೂಪಿಸುವುದರಿಂದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದರು.

ಸಿದ್ದಾಪುರದ ಬಸವರಾಜ ನೀರಗಂಟಿ ಅವರ ಜಮೀನಿನಲ್ಲಿ ಡಿಸಿ ನಲಿನ್ ಅತುಲ್ ಯಾಂತ್ರೀಕೃತ ವಾಹನ ಚಾಲನೆ ಮಾಡಿ ಭತ್ತ ನಾಟಿ ಮಾಡಿದರು.

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಮೊದಲು ಈ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಂಡಿದ್ದೇವು. ಆಗ ಹೆಚ್ಚಿನ ಜನರು ಬರುತ್ತಿರಲಿಲ್ಲ. ಹೀಗಾಗಿ ಗ್ರಾಪಂ ಮಟ್ಟದಲ್ಲಿ ಏರ್ಪಡಿಸಲಾಗುತ್ತಿದೆ. ಗ್ರಾಮದ ಅನೇಕ ಸಮಸ್ಯೆಗಳು ಗಮನಕ್ಕೆ ಬಂದಿವೆ. ಕುಡಿವ ನೀರಿನ ಸಮಸ್ಯೆ, ಘನ ತ್ಯಾಜ್ಯ ವಿಲೇವಾರಿ ಘಟಕ, ಜೆಜೆಎಂ ಕಾಮಗಾರಿಗಳು ಅಪೂರ್ಣ ಸೇರಿ ಇತರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು. ಸಭೆಯಲ್ಲಿ ಒಟ್ಟು 256 ಅರ್ಜಿಗಳು ಸ್ವೀಕೃತಗೊಂಡವು. ಎಡಿಸಿ ಸಿದ್ದರಾಮೇಶ್ವರ, ಎಸಿ ಕ್ಯಾ.ಮಹೇಶ್ ಮಾಲಗಿತ್ತಿ, ಗ್ರಾಪಂ ಅಧ್ಯಕ್ಷೆ ಶಿವಗಂಗಾ, ಉಪಾಧ್ಯಕ್ಷ ಗಂಗಪ್ಪ ಸುಂಕದ್, ತಹಸೀಲ್ದಾರ್ ಕುಮಾರಸ್ವಾಮಿ, ತಾಪಂ ಇಒ ಲಕ್ಷ್ಮೀದೇವಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ನಾಲೆಗಳಿಗೆ ನೀರು ಹರಿಸಿ

ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಿದ ವೇಳೆ 31ನೇ ಡಿಸ್ಟ್ರಿಬ್ಯೂಟರ್ ಉಪ ಕಾಲುವೆಗಳ ಕೆಳ ಭಾಗದ ರೈತರಿಗೆ ತಲುಪುವುದಿಲ್ಲ. ಇದಕ್ಕೆ ಕ.ನೀ.ನಿ.ನಿ. ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ. ಅಲ್ಲದೇ, ಕೆಲ ವಿಮಾ ಕಂಪನಿಗಳು ಕಂತು ಪಾವತಿಸಿಕೊಂಡು ಬೆಳೆ ಹಾನಿ ವೇಳೆ ಹಣ ಪಾವತಿಸುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿ ಪ್ರತಿಕ್ರಿಯಿಸಿ, ಗೆಜೆಟ್‌ನಲ್ಲಿರುವ ನೀರಾವರಿ ಪ್ರದೇಶಕ್ಕೂ ಉಳುಮೆ ಮಾಡುವ ಭೂಮಿ ದುಪ್ಪಟ್ಟಾಗಿದೆ. ಹೀಗಾಗಿ ಸಮಸ್ಯೆಯಾಗುತ್ತಿದೆ. ಎಲ್ಲರೂ ನೀರು ಪಡೆದರೆ ಹೇಗೆ ಎಂದು ಪ್ರಶ್ನಿಸಿದರು. ಅಧಿಕಾರಿಗಳು ಹೇಗೆ ಇಷ್ಟೊಂದು ಪ್ರದೇಶ ನೀರಾವರಿ ಮಾಡಿದರು ಎಂದು ಮರು ಪ್ರಶ್ನಿಸಿದರು. ಬಳಿಕ ನೀರಾವರಿ ಇಲಾಖೆ ಅಧಿಕಾರಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಂತೆ ಕ್ರಮವಹಿಸುತ್ತೇನೆ ಎಂದರು.

ಭತ್ತ ನಾಟಿ ಮಾಡಿದ ಜಿಲ್ಲಾಧಿಕಾರಿ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ಬಸವರಾಜ ನೀರಗಂಟಿ ಅವರ ಜಮೀನಿನಲ್ಲಿ ಹಮ್ಮಿಕೊಂಡಿದ್ದ ಯಾಂತ್ರೀಕೃತ ಭತ್ತ ನಾಟಿ ಕಾರ್ಯ ನಡೆಯಿತು. ಇದಕ್ಕೆ ಸ್ವತಃ ಡಿಸಿ ನಲಿನ್ ಅತುಲ್ ಯಂತ್ರ ಚಾಲನೆ ಮಾಡಿ ಭತ್ತ ನಾಟಿ ಮಾಡಿದರು. ಬಳಿಕ ಕಸ್ತೂರಬಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪಠ್ಯ ಚಟುವಟಿಕೆಗಳ ಕುರಿತು ಚರ್ಚಿಸಿದರು. ಬಳಿಕ ಮಲ್ಲಿಕಾರ್ಜುನ ನಗರದಲ್ಲಿರುವ ಶಾಲೆಗೆ ಭೇಟಿ ನೀಡಿದರು. ಜಿಪಂ ಸಿಇಒ ಇತರ ಇಲಾಖೆ ಅಧಿಕಾರಿಗಳಿದ್ದರು.

ಅಧಿಕಾರಿಗಳಿಗೆ ಖಡಕ್ ಸೂಚನೆ

ಪಿಆರ್‌ಇಡಿ ಇಲಾಖೆ ಎಇಇ ವಿಜಯಕುಮಾರ್ ಅವರು ಜೀರಾಳ್‌ದಿಂದ ಜೀರಾಳ್ ಕಲ್ಗುಡಿವರೆಗಿನ ಪಿಡಬ್ಲುೃಡಿ ರಸ್ತೆಗೆ ಇಲಾಖೆಯಿಂದ ಹೊಸ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದ ದೂರಿನ ಸಂಬಂಧ ಡಿಸಿ ಖಡಕ್ ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಲೋಕೋಪಯೋಗಿ ಇಲಾಖೆ ರಸ್ತೆ ನಿರ್ವಹಣೆಯನ್ನು ಅವರೇ ನೋಡಿಕೊಳ್ಳುತ್ತಾರೆ. ಪಿಡಬ್ಲುೃಡಿ ಅವರ ಗಮನಕ್ಕೆ ತರದೇ ಯಾವುದೇ ಕಾರ್ಯವನ್ನು ಪಿಆರ್‌ಇಡಿ ಇಲಾಖೆ ಮಾಡುವಂತಿಲ್ಲ. ಮೊದಲಿನಂತೆಯೇ 5.5 ಮೀಟರ್ ಅಗಲದ ರಸ್ತೆಯನ್ನೇ ನಿರ್ಮಿಸಬೇಕು ಎಂದು ಖಡಕ್ ಆಗಿ ಸೂಚಿಸಿದರು. ಇನ್ನು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆಯನ್ನೂ ಸಹ ಸಮರ್ಪಕವಾಗಿ ನಿರ್ಮಾಣ ಮಾಡುವಂತೆ ಆದೇಶಿಸಿದರು.

ಅಕ್ರಮ ಒತ್ತುವರಿ ತಡೆಯಿರಿ

ಜನಸ್ಪಂದನ ಸಭೆಯಲ್ಲಿ ಡಿಸಿಗೆ ಸಾರ್ವಜನಿಕರು ಮನವಿಗಳ ಮಹಾಪೂರವನ್ನೇ ಹರಿಸಿದರು. ಜಮೀನು ಒತ್ತುವರಿ, ಪಹಣಿ ಬದಲಾವಣೆ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಕಾನೂನು ಪ್ರಕಾರ ಕಾರ್ಯ ನಿರ್ವಹಿಸುವುದಿಲ್ಲ. ವಸತಿ ನಿಲಯದ ಹಾಸ್ಟೆಲ್‌ಗಳಿಗೆ ಕಾಯಂ ಕಾವಲುಗಾರರಿಲ್ಲ. ಜಮೀನು ಅಕ್ರಮ ಒತ್ತುವರಿ, ಪಹಣಿ ನಂಬರ್‌ಗಳು ಅದಲು ಬದಲು ಸೇರಿ ಇತರ ಸಮಸ್ಯೆಗಳನ್ನು ಜನರು ಡಿಸಿಗೆ ಮನವರಿಕೆ ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರವೇ ಸಮಸ್ಯೆ ಬಗೆಹರಿಸುವಂತೆ ಡಿಸಿ ಸೂಚನೆ ನೀಡಿದರು.

ಸಿದ್ದಾಪುರ ಆರ್‌ಎಸ್ಕೆ ಸರಿಪಡಿಸಿ

ಸಿದ್ದಾಪುರದ ರೈತ ಸಂಪರ್ಕ ಕೇಂದ್ರದ ಬಗ್ಗೆ ಈಗಾಗಲೇ ಅನೇಕ ದೂರುಗಳು ಸಲ್ಲಿಕೆಯಾಗಿವೆ. ಕೆಡಿಪಿ ಸಭೆಯಲ್ಲೂ ಪ್ರಸ್ತಾಪವಾಗಿದೆ. ಲೋಕೋಪಯೋಗಿ ಇಲಾಖೆ ಸೂಚಿಸಿರುವಂತೆ ಈಗಿರುವ ಲೋಪಗಳನ್ನು ಸರಿಪಡಿಸಿ ರೈತರ ಬಳಕೆಗೆ ನೀಡುವಂತೆ ಡಿಸಿ ಸೂಚಿಸಿದರು. ಇದಕ್ಕೆ ಕೆಆರ್‌ಐಡಿಎಲ್ ಅಧಿಕಾರಿ ಒಪ್ಪಿಗೆ ನೀಡಿದರು.

ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು.