ಹಾಸನ: ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಿಕ್‌ಅಪ್ ವಾಹನ ಸಮೇತ ಚಾಲಕನನ್ನು ಅರಕಲಗೂಡು ತಾಲೂಕಿನ ಕಂಚೇನಹಳ್ಳಿ ಬಳಿ ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಳೆನರಸೀಪುರ ತಾಲೂಕು ಅಗ್ರಹಾರ ವಡ್ಡರಹಳ್ಳಿ ಗ್ರಾಮದ ಚಾಲಕ ನಾರಾಯಣ ಬಂಧಿತ. 1.28 ಲಕ್ಷ ರೂ. ಮೌಲ್ಯದ ಒಟ್ಟು 36 ಕ್ವಿಂಟಾಲ್ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು. ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆಹಾರ ಶಿರಸ್ತೇದಾರ್ ಮಂಜು ಹಾಗೂ ಆಹಾರ ನಿರೀಕ್ಷಕಿ ರೂಪಾ ಅವರು ಖಾಸಗಿ ವಾಹನದಲ್ಲಿ ತೆರಳಿ ಪಿಕ್‌ಅಪ್ ವಾಹನವನ್ನು ಹಿಂಬಾಲಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೊಳೆನರಸೀಪುರದ ಯೋಗೇಶ್ ಅವರು ಅಕ್ಕಿ ತೆಗೆದುಕೊಂಡು ಬರಲು ಹೇಳಿದ್ದರು ಎಂದು ಬಂಧಿತ ಚಾಲಕ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಸೋಮವಾರಪೇಟೆ ಹಾಗು ಅರಕಲಗೂಡು ತಾಲೂಕಿನ ವಿವಿಧ ಗ್ರಾಮಗಳಿಂದ ಸಂಗ್ರಹಿಸಿದ ಅಕ್ಕಿ ಇದಾಗಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ವಿತರಿಸಲಾದ ಅಕ್ಕಿಯನ್ನು ಪಡಿತರದಾರರು ಕಡಿಮೆ ಬೆಲೆಗೆ ದಿನಸಿ ಅಂಗಡಿಗಳಿಗೆ ಮಾರಾಟ ಮಾಡಿರುತ್ತಾರೆ. ಅದನ್ನು ಯೋಗೇಶ್ ಖರೀದಿಸಿ ತರುತ್ತಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಅರಕಲಗೂಡು ಪೊಲೀಸರು ಯೋಗೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.