ಜಿಲ್ಲೆ

36 ಮಹಿಳೆಗೆ ಕೂಸಿನ ಮನೆ ತರಬೇತಿ

Mysuru - Desk - Naveen Kumar H P


ಚಾಮರಾಜನಗರ : ರುಡ್‌ಸೆಟ್ ಸಂಸ್ಥೆಯಿಂದ ಗುಂಡ್ಲುಪೇಟೆಯ ತೆರಕಣಾಂಬಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಿರ್ಮಿಸಿರುವ ಮಾದರಿ ಕೂಸಿನ ಮನೆಯ ನಿರ್ವಹಣೆ ಬಗ್ಗೆ ಶುಕ್ರವಾರ ತರಬೇತಿ ನೀಡಲಾಯಿತು.


40 ಮಕ್ಕಳ ಸಾಮರ್ಥ್ಯವಿರುವ ಈ ಮನೆಯಲ್ಲಿ ಬೆಳಕು, ನೀರು, ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜತೆಗೆ ಮಕ್ಕಳ ಆಟಿಕೆ ಸಾಮಾಗ್ರಿಗಳು, ಕಲಿಕಾ ಸಾಮಾಗ್ರಿಗಳನ್ನು ಅಳವಡಿಸಲಾಗಿದೆ. ಈ ಎಲ್ಲ ವಸ್ತುಗಳನ್ನು ಬಳಸಿಕೊಂಡು ಕೂಸಿನ ಮನೆಗೆ ಬರುವ ಮಕ್ಕಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಮಹಿಳೆಯರು ಒಂದು ದಿನದ ತರಬೇತಿ ಪಡೆದುಕೊಂಡರು.


ಮಕ್ಕಳ ಮನೋಲ್ಲಾಸಕ್ಕೆ ಕಾರಣವಾಗುವ ಚಿತ್ರಗಳನ್ನು ಆಯಿಲ್ ಪೇಂಟಿನಿಂದ ಬಿಡಿಸಲಾಗಿದೆ. ಮನೆಗೆ ಪ್ರವೇಶಿಸಿದ ಮಗುವನ್ನು ಬೊಂಬೆಯ ಮನೆಗೆ ಕರೆದೊಯ್ದು ಆಟ ಆಡಿಸುವುದು, ಕುಳಿತುಕೊಳ್ಳಲು ಚಿಕ್ಕ ಕುರ್ಚಿಗಳು, ನಿದ್ರೆ ಬಂದರೆ ಮಲಗಿಸಲು ಚಿಕ್ಕ ತೊಟ್ಟಿಲು, ಸಣಪುಟ್ಟ ಗಾಯಗಳಾದರೆ ಔಷಧಿ, ಎಲ್ಲಾ ಮಕ್ಕಳಿಗೂ ಪ್ರತ್ಯೇಕ ಟವೆಲ್ ಹಾಗೂ ಪೌಷ್ಟಿಕ ಆಹಾರ ತಯಾರಿಸಲು ಅಡುಗೆ ಮನೆ ನಿರ್ಮಿಸಲಾಗಿದೆ. ಆಹಾರ ನೀಡಲು ತಟ್ಟೆಗಳು ಇವೆ ಎಂದು ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹದೇವಸ್ವಾಮಿ ತಿಳಿಸಿದರು.


ಈ ಕೂಸಿನ ಮನೆಯನ್ನು ಕಳೆದ ವಾರ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉದ್ಘಾಟಿಸಿದ್ದರು.