ಜಿಲ್ಲೆ

ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಲಿ: ಶಾಸಕ ರವಿಕುಮಾರ್ ಗಣಿಗ ಸಲಹೆ

ಮಂಡ್ಯ: ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕಾರ್ಯದಿಂದ ಕಲೆ ಉಳಿದು ಬೆಳೆಯಲು ಸಾಧ್ಯ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ತಾಲೂಕಿನ ಬಿ.ಹೊಸೂರು ಕಾಲನಿಯಲ್ಲಿರುವ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಆವರಣದಲ್ಲಿ ಹೊನ್ನಕರ್ಣಿಕ ಸಾಂಸ್ಕೃತಿಕ ಟ್ರಸ್ಟ್ ಶಿವಾರ ಮತ್ತು ಕೃಷಿಕ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಗುರು ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 352ನೇ ಆರಾಧನೆ ಮಹೋತ್ಸವ ಅಂಗವಾಗಿ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದರು.

ಸಣ್ಣ ಗ್ರಾಮಗಳಲ್ಲಿರುವ ಕಲಾವಿದರಿಂದ ಕಲೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಉಳಿದು ಬೆಳೆಯುತ್ತಿವೆ. ಮುಂದಿನ ದಿನಗಳಲ್ಲಿ ಶಿವಾರ ಉಮೇಶ್ ಮತ್ತು ತಂಡದವರ ನೇತೃತ್ವದಲ್ಲಿ ತಂಬೂರಿ ಕಲಾವಿದರಿಂದ ಜಾನಪದ ಕಲೆ, ರಂಗಭೂಮಿ ಕಲಾವಿದರನ್ನು ಗೌರವಿಸುವ ಕಾರ್ಯ ಸಾಗಲಿ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ, ಸಂಪೂರ್ಣ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ನುಡಿದರು.

ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, 20 ವರ್ಷದಿಂದ ಗುರು ರಾಘವೇಂದ್ರ ತೀರ್ಥ ಆರಾಧನೆಯ ದಿನ ಸಂಗೀತೋತ್ಸವ ಆಯೋಜಿಸಿಕೊಂಡು ಬರುತ್ತಿದ್ದೇವೆ. ನಾವು ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭಾವನೆ ಬಿತ್ತುವ ಕಾರ್ಯಕ್ರಮ ಮಾಡುತ್ತಿಲ್ಲ. ಬದಲಿಗೆ ಮೂಢನಂಬಿಕೆಯನ್ನು ನಾವು ವಿರೋಧಿಸುತ್ತೇವೆ ಎಂದು ನುಡಿದರು.

ಹೊನ್ನಕರ್ಣಿಕ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಶಿವಾರ ಉಮೇಶ್, ವಿವಿಯ ವಿಶೇಷ ಅಧಿಕಾರಿ ಡಾ.ಜಿ.ಎನ್.ಕಿರಣ್, ಕೃಷಿಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಪಿ.ವೀರಪ್ಪ, ರಂಗಭೂಮಿ ಕಲಾವಿದ ಸಂಪಹಳ್ಳಿ ಬಸವರಾಜು, ಮಂಡ್ಯ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಗಾಯಕ ಶೇಖರ್, ದೇವರಾಜ್ ಕೊಪ್ಪ, ಗುರುಸಿದ್ದಯ್ಯ ಇತರರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ಗಾಯಕಿ ಪುಟ್ಟಮಂಚಮ್ಮ ಅವರನ್ನು ಸನ್ಮಾನಿಸಿದರು.