ಕಾರವಾರ: ಜಿಲ್ಲೆಯ ಕರಾವಳಿಯ 101 ಗ್ರಾಪಂಗಳ 1,380 ಸದಸ್ಯರ ಆಯ್ಕೆಗೆ ನಾಮಪತ್ರ ಸಲ್ಲಿಕೆ ಅವಕಾಶ ಶುಕ್ರವಾರ ಮುಕ್ತಾಯವಾಗಿದ್ದು, 3,500 ಕ್ಕೂ ಅಧಿಕ ಜನ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಎಲ್ಲ ಗ್ರಾಪಂಗಳಲ್ಲಿ ನಾಮಪತ್ರ ಸಲ್ಲಿಕೆಗೆ ಶುಕ್ರವಾರ ದೊಡ್ಡ ಸರದಿಯೇ ಕಂಡುಬಂತು. ಕಾರವಾರ ಮಲ್ಲಾಪುರ ಗ್ರಾಪಂನಲ್ಲಿ ಗುರುವಾರ ತಡ ರಾತ್ರಿಯವರೆಗೂ ನಾಮಪತ್ರ ಸ್ವೀಕರಿಸಲಾಗಿತ್ತು. ಶುಕ್ರವಾರವೂ ಜನರ ಸರದಿ ದೊಡ್ಡದೇ ಇತ್ತು.
ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸ್ವೀಕಾರದ ಅವಧಿ ಎಲ್ಲ ಗ್ರಾಪಂಗಳಲ್ಲಿ ಮುಗಿಯಬೇಕಿತ್ತು. ಆದರೆ, ಬಹುತೇಕ ಎಲ್ಲ ಪಂಚಾಯಿತಿಗಳಲ್ಲಿ ಬೆಳಗ್ಗೆಯೇ ಬಂದು ಜನ ಹೆಸರು ನೋಂದಾಯಿಸಿದ್ದರಿಂದ ಸಂಜೆವರೆಗೂ ಅಧಿಕಾರಿಗಳು ನಾಮಪತ್ರ ಸ್ವೀಕರಿಸಿದರು. ದಾಖಲೆ ಪರಿಶೀಲಿಸಿ ಅದನ್ನು ಚುನಾವಣೆ ಆಯೋಗದ ವೆಬ್ಸೈಟ್ಗೆ ಅಪ್ಲೋಡ್ ಮಾಡುವ ಹೊತ್ತಿಗೆ ರಾತ್ರಿಯಾಗಿತ್ತು.
ಕೊನೆಯ ದಿನವಾಗಿದ್ದರಿಂದ ಸಾಕಷ್ಟು ಆಕಾಂಕ್ಷಿಗಳು ಅಫಿಡವಿಟ್, ಜಾತಿ ಪ್ರಮಾಣಪತ್ರ ಹೀಗೆ ವಿವಿಧ ದಾಖಲೆಗಳನ್ನು ಕಲೆಹಾಕಲು ಓಡಾಡುತ್ತಿರುವುದು ಕಂಡುಬಂತು. ಅಲ್ಲದೆ, ಆಕಾಂಕ್ಷಿಗಳು ತಮ್ಮ ಸರದಿಗಾಗಿ ಕಾದು ಕುಳಿತಿದ್ದರು. ಡಿ. 12ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, 14ರಂದು ಹಿಂಪಡೆಯಲು ಕೊನೆಯ ದಿನವಾಗಿದೆ.
ಎರಡು, ಮೂರು ನಾಮಪತ್ರ: ಗೆಲುವಿನ ಬಗ್ಗೆ ಅನುಮಾನವಿರುವ ಹಲವರು ಎರಡು, ಮೂರು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಒಂದೊಂದು ಕ್ಷೇತ್ರಕ್ಕೆ ಗರಿಷ್ಠ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಭಾರಿ ಪೈಪೋಟಿ ಕಂಡುಬಂದಿದೆ.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಗ್ರಾಪಂ ಕಣಕ್ಕೆ
ಕಾರವಾರ: ಗ್ರಾಮ ಪಂಚಾಯಿತಿ ಚುನಾವಣೆ ಈ ಬಾರಿ ರಂಗು ಪಡೆದುಕೊಳ್ಳುತ್ತಿದೆ. ಕಾರವಾರ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಅಮದಳ್ಳಿ ಗ್ರಾಪಂ ಸಾಣೆಮಕ್ಕಿ ವಾರ್ಡ್ನಿಂದ ಸ್ಪರ್ಧೆಗಿಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ತಾಪಂ ಅಧಿಕಾರಾವಧಿ ಮುಕ್ತಾಯವಾಗುತ್ತದೆ. ನಂತರ ನಮ್ಮ ಕ್ಷೇತ್ರದಲ್ಲಿ ಮೀಸಲಾತಿ ಬದಲಾಗಲಿದ್ದು, ನಮಗೆ ಸ್ಪರ್ಧೆಗೆ ಅವಕಾಶ ಸಿಗದೇ ಹೋಗಬಹುದು ಇದರಿಂದ ಗ್ರಾಪಂಗೆ ಸ್ಪರ್ಧಿಸಿದ್ದಾಗಿ ಅವರು ಹೇಳಿದ್ದಾರೆ.
ಇನ್ನು ಮುಡಗೇರಿ ಗ್ರಾಪಂ ಕಣದಲ್ಲಿ ಕಾರವಾರ ತಾಪಂ ಮಾಜಿ ಅಧ್ಯಕ್ಷೆ ಆರತಿ ಬಾನಾವಳಿ ಸ್ಪರ್ಧಿಸಿದ್ದಾರೆ. ಅವರ ಎದುರಿಗೆ ತಾಪಂ ಹಾಲಿ ಸದಸ್ಯ ಸುರೇಂದ್ರ ಗಾಂವಕರ್ ಸ್ಪರ್ಧೆಯಲ್ಲಿದ್ದಾರೆ. ಕಿನ್ನರ ಗ್ರಾಪಂನಲ್ಲಿ ತಾಪಂ ಹಾಲಿ ಸದಸ್ಯ ಪ್ರಶಾಂತ ಗೋವೇಕರ್ ಗ್ರಾಪಂ ಕಣಕ್ಕಿಳಿದಿದ್ದಾರೆ.
ಗಣ್ಯರು: ಚಿತ್ತಾಕುಲಾ ಗ್ರಾಪಂನಿಂದ ಮಾಜಿ ಅಧ್ಯಕ್ಷ, ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನುಗಾರರ ಫೆಡರೇಷನ್ ಅಧ್ಯಕ್ಷ ರಾಜು ತಾಂಡೇಲ ಅವರು ಚಿತ್ತಾಕುಲಾ ಗ್ರಾಪಂನ ಎರಡು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಫೆಡರೇಷನ್ ನಿಕಟಪೂರ್ವ ಅಧ್ಯಕ್ಷ ಗಣಪತಿ ಮಾಂಗ್ರೆ ಚೆಂಡಿಯಾ ಗ್ರಾಪಂನಿಂದ ಕಣಕ್ಕಿಳಿದಿದ್ದಾರೆ. ಮಾಂಗ್ರೆ ಈ ಹಿಂದೆ ಚೆಂಡಿಯಾ ಗ್ರಾಪಂ ಅಧ್ಯಕ್ಷರೂ ಆಗಿದ್ದರು.
5ನೇ ಬಾರಿಗೆ ಸ್ಪರ್ಧೆ: ಅಂಕೋಲಾ ಹೊನ್ನಬೈಲ್ ಗ್ರಾಪಂಗೆ ಸತತ 5 ಬಾರಿ ಸದಸ್ಯೆಯಾಗಿರುವ ಲೀಲಾವತಿ ನಾಯ್ಕ 6ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಅವರು ಗ್ರಾಪಂ ನಿಕಟಪೂರ್ವ ಅಧ್ಯಕ್ಷೆಯಾಗಿದ್ದು, ಈ ಹಿಂದೆ ಉಪಾಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು.
ಪತಿ, ಪತ್ನಿ ಕಣಕ್ಕೆ
ಚಿತ್ತಾಕುಲಾ ಗ್ರಾಪಂನಲ್ಲಿ ಈ ಹಿಂದೆ ಸದಸ್ಯರಾಗಿದ್ದ ಪತಿ- ಪತ್ನಿ ಈ ಬಾರಿಯೂ ನಾಮಪತ್ರ ಸಲ್ಲಿಸಿದ್ದಾರೆ. ಸೂರಜ್ ದೇಸಾಯಿ ಅವರು ಸದಾಶಿವಗಡ ಕಿಲ್ಲಾ ವಾರ್ಡ್ನಿಂದ ಹಾಗೂ ಅವರ ಪತ್ನಿ ಸ್ವಾತಿ ದೇಸಾಯಿ ಮಡಿವಾಳಶಿಟ್ಟಾದಿಂದ ಸದಸ್ಯರಾಗಿದ್ದರು. ಈ ಬಾರಿ ಸ್ವಾತಿ ಮಡಿವಾಳಶಿಟ್ಟಾ ಹಾಗೂ ಬೆತ್ನಾಯ್ಕವಾಡದಿಂದ ನಾಮಪತ್ರ ಸಲ್ಲಿಸಿದ್ದಾರೆ. ಸೂರಜ್ ಅವರು ಸದಾಶಿವಡ ಕಿಲ್ಲಾ ಹಾಗೂ ಬೆತ್ನಾಯ್ಕವಾಡ ವಾರ್ಡ್ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಮುಂದೆ ನಿರ್ಧಾರ ಮಾಡಿ ಒಂದು ನಾಮಪತ್ರ ಹಿಂಪಡೆಯಲಿದ್ದೇವೆ ಎಂದು ಸೂರಜ್ ದೇಸಾಯಿ ತಿಳಿಸಿದ್ದಾರೆ.