ಮೈಸೂರು: ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಸಲುವಾಗಿ 350 ವಿದ್ಯುತ್ ಚಾಲಿತ ಬಸ್‌ಗಳು ಸೇರಿದಂತೆ ಒಂದು ಸಾವಿರ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ಯೆ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ತಿಳಿಸಿದರು.
ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಹಂತ ಹಂತವಾಗಿ ಬಸ್ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರೊನಾ ಸೇರಿದಂತೆ ಇನ್ನಿತರ ಕಾರಣದಿಂದಾಗಿ ನಿಗಮದಿಂದ ಹೊಸ ಬಸ್ ಖರೀದಿಸಿರಲಿಲ್ಲ. ಡೀಸೆಲ್ ಬಳಕೆಯ ಬಸ್‌ಗಳ ಖರೀದಿ ಕಡಿಮೆ ಮಾಡಿ ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡಲಾಗುತ್ತಿದೆ. ಫೆ.15ರೊಳಗೆ 50 ಇವಿ ಬಸ್‌ಗಳು ಬರಲಿವೆ ಎಂದು ತಿಳಿಸಿದರು.
20 ಅಂಬಾರಿ ಉತ್ಸವ, 350 ಎಲೆಕ್ಟ್ರಿಕ್, 40 ನಾನ್ ಎಸಿ ಸ್ಲೀಪರ್, 13.5 ಮೀಟರ್ ನಾಲ್ಕು ಎಸಿ ಸ್ಲೀಪರ್, 13.4 ಮೀಟರ್ 4 ನಾನ್ ಎಸಿ ಸ್ಲೀಪರ್, 50 ಸಿಟಿ ವೆಹಿಕಲ್, 550 ಕರ್ನಾಟಕ ಸಾರಿಗೆ ವಾಹನ ಖರೀದಿಸಲಾಗುತ್ತದೆ. ಈಗಾಗಲೇ ಇವಿ ಬಸ್‌ಗಳಿಗೆ ಚೀನಾ ಮೂಲದ ಕಂಪನಿಗೆ ಟೆಂಡರ್ ನೀಡಲಾಗಿದೆ. ಕರೊನಾ ಕಾರಣಕ್ಕಾಗಿ ಬ್ಯಾಟರಿಗಳ ಉತ್ಪಾದನೆಯಲ್ಲಿ ವ್ಯತ್ಯಾಸವಾಗಿರುವ ಕಾರಣ ಬರುವುದು ವಿಳಂಬವಾಗಿದೆ. ಫೆ.15ರೊಳಗೆ ಸಾರ್ವಜನಿಕರ ಸೇವೆಗೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.