ಜಿಲ್ಲೆ

ತಾಂತ್ರಿಕ ಕಾರಣದಿಂದ 35 ಕಡತ ವಿಲೇವಾರಿ ಬಾಕಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಬೈಂದೂರು ಹೋಬಳಿಯಲ್ಲಿ ಸಮಸ್ಯಾತ್ಮಕವಲ್ಲದ ಎಲ್ಲ ಅಕ್ರಮ ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 35 ಕಡತಗಳು ತಾಂತ್ರಿಕ ಕಾರಣದಿಂದ ಮಂಜೂರಾತಿಗೆ ಬಾಕಿ ಇದ್ದು, ಶೀಘ್ರ ವಿಲೇವಾರಿ ಮಾಡಲಾಗುವುದು ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.

ಬೈಂದೂರು ಹೋಬಳಿಯ ಬಗರ್‌ಹುಕುಂ (ಅಕ್ರಮ ಸಕ್ರಮ) ಹಾಗೂ 94ಸಿ ಬಾಕಿ ಕಡತಗಳ ವಿಲೇವಾರಿ ಸಂಬಂಧ ಬೈಂದೂರು ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖಾಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಕುಮ್ಕಿ ವ್ಯಾಪ್ತಿಯ ಅರ್ಜಿಗಳ ವಿಲೇವಾರಿಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಸಚಿವರ ಗಮನ ಸೆಳೆಯಲಾಗುವುದು. ಕ್ಷೇತ್ರದ ಬೈಂದೂರು ಹಾಗೂ ವಂಡ್ಸೆ ಹೋಬಳಿಯಲ್ಲಿ ಕುಮ್ಕಿ ಮಿತಿಯಲ್ಲಿ ನಮೂನೆ 50,53 ಹಾಗೂ 57ರಲ್ಲಿ ಸುಮಾರು 14,968 ಅರ್ಜಿಗಳು ಇದ್ದು, ಅರ್ಹ ರೈತರಿಗೆ ಭೂಮಂಜೂರಾತಿ ಮಾಡಲು ಮಾ.3ರಿಂದ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರ ಗಮನ ಸೆಳೆಯಲಾಗುವುದು. ರೈತಾಪಿ ವರ್ಗದ ಹಿತ ಕಾಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.  ತಹಸೀಲ್ದಾರ್ ಭೀಮ್‌ಸೇನ್ ಕುಲಕರ್ಣಿ, ಉಪತಹಸೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣದ ಸಾಕಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಅರಣ್ಯ, ಸರ್ವೇ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇಗೆ ಈಗಾಗಲೇ ನಿಗದಿಪಡಿಸಿದ ಕಾಲಮಿತಿಯೊಳಗೆ ಡೀಮ್ಡ್ ಫಾರೆಸ್ಟ್‌ನ ಸರ್ವೇ ನಡೆಸಿ ಮೂರು ಇಲಾಖೆಗಳ ಅಗತ್ಯ ಸಮನ್ವಯದೊಂದಿಗೆ ಬಗರ್‌ಹುಕುಂ ಕಡತಗಳ ವಿಲೇವಾರಿಗೆ ಪೂರಕ ಕ್ರಮ ಕೈಗೊಳ್ಳಬೇಕು ಹಾಗೂ ಬಾಕಿ ಉಳಿದ 94ಸಿ ಅರ್ಜಿಗಳು ಕೂಡ ವಿಲೇವಾರಿ ಆಗಬೇಕು. - ಗುರುರಾಜ್ ಶೆಟ್ಟಿ ಗಂಟಿಹೊಳೆ ಶಾಸಕ https://www.vijayavani.net/dharmasthala-project-a-model-for-society https://www.vijayavani.net/the-installation-of-god-in-the-chariot-of-the-heart