ಟಿ. ಶ್ರೀನಿವಾಸ ಹೊನ್ನಾಳಿ
ಜನಪ್ರತಿನಿಧಿಗಳು, ಗ್ರಾಪಂ ಅಧಿಕಾರಿಗಳಿಗೆ ಮನವಿ ನೀಡಿ..ನೀಡಿ ನಮಗೆ ಸಾಕಾಗಿದೆ. ಇನ್ನೂ ನಮ್ಮಿಂದ ಆಗುವುದಿಲ್ಲ. ವಾರದೊಳಗೆ ನಮಗೆ ಮೂಲಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ಕುರಿ, ಜಾನುವಾರುಗಳ ಸಮೇತ ತಾಲೂಕು ಕಚೇರಿ ಹಾಗೂ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುತ್ತೇವೆ.
ಯಾವುದೇ ಸೌಲಭ್ಯಗಳಿಲ್ಲದೆ 2 ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳು ಅಧಿಕಾರಿಗಳಿಗೆ ಈ ರೀತಿ ಎಚ್ಚರಿಕೆ ನೀಡಿವೆ.
ಹೊನ್ನಾಳಿಯಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಅರಬಗಟ್ಟೆ ಗ್ರಾಮದ ಗೋಮಾಳದಲ್ಲಿ 35 ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳು ಗ್ರಾಮದಲ್ಲಿ ಸ್ಥಳದ ಕೊರತೆಯಿಂದಾಗಿ ಗ್ರಾಮ ಪಂಚಾಯಿತಿ ಸೂಚನೆ ಮೇರೆಗೆ ಗೋಮಾಳದ ಸರ್ವೇ ನಂ. 113 ಹಾಗೂ 115ರಲ್ಲಿ ಶೆಡ್ ನಿರ್ಮಿಸಿಕೊಂಡಿವೆ. ಜತೆಗೆ, ನೂರಾರು ದನಕರುಗಳು, 600 ಕುರಿಗಳು ಇವೆ. ಆದರೆ, ಇಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಯಾವ ಸೌಲಭ್ಯಗಳು ಇಲ್ಲದೆ ಕಾಡುವಾಸಿಗಳಂತೆ ಬದುಕು ಸಾಗಿಸುತ್ತಿದ್ದಾರೆ.
ಸೌಲಭ್ಯ ಒದಗಿಸುವಂತೆ ಹತ್ತಾರೂ ಬಾರಿ ಶಾಸಕರಿಗೆ, ಅಧಿಕಾರಿಗಳಿಗೆ, ಗ್ರಾಪಂಗೆ ಮನವಿ, ಒತ್ತಾಯ ಮಾಡುತ್ತಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಸಾರ್ವಜನಿಕರ ಹಿತ ಕಾಯಬೇಕಾದ ಗ್ರಾಪಂ ನಿದ್ರಾವಸ್ಥೆಯಲ್ಲಿದೆ.
ರಾತ್ರಿಯಾದರೇ ಮಕ್ಕಳು, ಹೆಣ್ಣುಮಕ್ಕಳು ಹೊರಗೆ ಬಾರದ ಸ್ಥಿತಿ ಇದೆ. ಜತೆಗೆ, ಹಾವು, ಚೇಳು ಮತ್ತಿತರ ವಿಷಜಂತುಗಳ ಕಾಟದ ನಡುವೆ ಜೀವ ಕೈಯಲ್ಲಿಡಿದುವ ಬದುಕುವ ದುಸ್ಥಿತಿ ಎದುರಾಗಿದೆ. ವಿದ್ಯುತ್ ಇಲ್ಲದೆ ಓದಿಕೊಳ್ಳಲು ಆಗದೇ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಜೂನ್ 3ರಂದು ಈ ಕುರಿತು ಡಿಸಿಗೆ ಮನವಿ ಸಲ್ಲಿಸಿದಾಗ, ಅವರು ತಾಪಂ ಇಒಗೆ ಪತ್ರ ಬರೆದು ಈ ಕೂಡಲೇ ಮೂಲಸೌಕರ್ಯ ಕಲ್ಪಿಸುವಂತೆ ಸೂಚಿಸಿದ್ದರು. ಆದರೆ, ಈವರೆಗೂ ಯಾವ ಅಧಿಕಾರಿಯೂ ಇತ್ತ ಸುಳಿದಿಲ್ಲ ಎಂದು ನಿವಾಸಿ ಸವಿತಮ್ಮ ಅಳಲು ತೋಡಿಕೊಂಡರು.
ಆದ್ದರಿಂದ ಇನ್ನೊಂದು ವಾರದಲ್ಲಿ ನಮಗೆ ಮೂಲಸೌಕರ್ಯ ಒದಗಿಸದಿದ್ದಲ್ಲಿ ತಾಲೂಕು ಕಚೇರಿ ಹಾಗೂ ತಾಪಂ ಕಚೇರಿಗೆ ಕುರಿ ಹಾಗೂ ಜಾನುವಾರುಗಳ ಸಮೇತ ಮನೆ ಮಂದಿಯೆಲ್ಲ ತೆರಳಿ ಪ್ರತಿಭಟನೆ ಮಾಡುತ್ತೇವೆ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಬಡತನ ಕಾರಣದಿಂದ ಇಲ್ಲಿ ಬಂದು ಶೆಡ್ ನಿರ್ಮಿಸಿಕೊಂಡಿದ್ದೇವೆ. ಆದರೆ, 2 ವರ್ಷವಾದರೂ ಯಾವೊಂದು ಸೌಲಭ್ಯ ಕಲ್ಪಿಸಿಲ್ಲ. ರಾತ್ರಿಯಾದರೇ ಹೊರಬರಲು ಭಯವಾಗುತ್ತಿದೆ. ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಇನ್ನಾದರೂ ಎಲ್ಲರಂತೆ ಬದುಕು ಕಟ್ಟಿಕೊಳ್ಳಲು ನಮಗೂ ಮೂಲಸೌಲಭ್ಯ ಕಲ್ಪಿಸಿ.
-ಅನಿತಾ, ನಿವಾಸಿ.
ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಎಲ್ಲ ಸೌಲಭ್ಯ ಒದಗಿಸುವ ಭರವಸೆ ನೀಡಿದರು. ಆದರೆ, ಈವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ತಾಲೂಕು ಆಡಳಿತ, ತಾಪಂ ಹಾಗೂ ಗ್ರಾಪಂ ಈಗಲಾದರೂ ಎಚ್ಚೆತ್ತು ನಮಗೆ ಮೂಲ ಸೌಕರ್ಯಗಳನ್ನು ಒದಗಿಸಲಿ.
-ತಿಪ್ಪೇಶಪ್ಪ, ಗ್ರಾಪಂ ಮಾಜಿ ಅಧ್ಯಕ್ಷ.
ಅರಬಗಟ್ಟೆ ಗ್ರಾಮದ ನಿವೇಶನ ರಹಿತರು ಸರ್ವೇ 113 ಹಾಗೂ 115ರಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಈ ನಿವೇಶನಗಳ ಅಭಿವೃದ್ಧಿ ಪಡಿಸಲು ಅನುಮೋದನೆಗಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮೋದನೆಯಾಗಿ ಬಂದ ನಂತರ ಸದರಿ ಜಾಗದಲ್ಲಿ ನಿವೇಶನ ಅಭಿವೃದ್ಧಿಪಡಿಸಿ, ಅಲ್ಲಿರುವವರಿಗೆ ಸೌಕರ್ಯ ಒದಗಿಸಲಾಗುವುದು.
-ರಾಮಭೋವಿ, ತಾಪಂ ಇಒ ಹೊನ್ನಾಳಿ.