ಜಿಲ್ಲೆ

347 ಮೊಬೈಲ್ ಫೋನ್‌ಗಳನ್ನು ಪತ್ತೆ:ಎಸ್ಪಿ. ಹರಿರಾಮ್ ಶಂಕರ್

ಹಾಸನ: ಜಿಲ್ಲೆಯಲ್ಲಿ ಸಿಇಐಆರ್ ಪೋರ್ಟಲ್‌ನಲ್ಲಿ ದಾಖಲಾದ 2,605 ದೂರು ಪ್ರಕರಣಗಳ ಪೈಕಿ ಈ ವರೆಗೆ ಒಟ್ಟು 347 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ 238 ಫೋನ್‌ಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ಫೋನ್‌ಗಳಿಗೆ ಸಂಬಂಧಿಸಿದಂತೆ ಜೂ.22 ರಿಂದ ಆ.7ರ ವರೆಗೆ ಒಟ್ಟು 109 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲಾಗಿದ್ದು ವಿವೊ 36, ಸ್ಯಾಮ್ಸಂಗ್ 20, ರೆಡ್ಮಿ 22, ಒನ್‌ಪ್ಲಸ್ 7, ಓಪ್ಪೊ 15 ಹಾಗು ನೋಕಿಯಾ ಕಂಪೆನಿಯ 8 ಫೋನ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಿಇಐಆರ್ ಪೋರ್ಟಲ್ ಮೂಲಕ ಇನ್ನೂ 273 ಫೋನ್‌ಗಳ ಮಾಹಿತಿ ಲಭ್ಯವಾಗಿದ್ದು, ಅವುಗಳ ಪತ್ತೆ ಕಾರ್ಯವೂ ಪ್ರಗತಿಯಲ್ಲಿವೆ. ಕೆಲವು ಫೋನ್‌ಗಳು ಕರ್ನಾಟಕ ಮಾತ್ರವಲ್ಲದೇ ಮಹರಾಷ್ಟ್ರ, ಕೇರಳ, ತಮಿಳುನಾಡು ಹಾಗು ಇತರ ರಾಜ್ಯಗಳಲ್ಲಿರುವ ಮಾಹಿತಿ ದೊರೆತಿದ್ದು ಸಾಧ್ಯವಾದಷ್ಟು ಬೇಗ ಎಲ್ಲವನ್ನೂ ಪತ್ತೆ ಮಾಡುವ ಪ್ರಯತ್ನ ಮಾಡಲಾಗುವುದು. ಮೊಬೈಲ್ ಕಳೆದುಕೊಂಡವರು ಕೂಡಲೇ ಸಮೀಪದ ಪೊಲೀಸ್ ಠಾಣೆ ಅಥವಾ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರೆ ಶೀಘ್ರವಾಗಿ ಪತ್ತೆ ಮಾಡಲು ಸಹಕಾರಿಯಾಗುತ್ತದೆ. ಪೊಲೀಸ್ ಕಾರ್ಯಾಚರಣೆಯಲ್ಲಿ ಸಾರ್ವಜನಿಕರ ಸಹಕಾರವೂ ಮುಖ್ಯವಾಗುತ್ತದೆ ಎಂದರು.