ಜಿಲ್ಲೆ

3,45,032 ಲಸಿಕೆ ಹಾಕುವ ಗುರಿ : ಜಿಲ್ಲಾಧಿಕಾರಿ ಲತಾ ಮಾಹಿತಿ

ಚಿಕ್ಕಬಳ್ಳಾಪುರ : ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಏ.1 ರಿಂದ ನಾಲ್ಕನೇ ಹಂತದ ಲಸಿಕಾ ಅಭಿಯಾನ ಆರಂಭಿಸಲಾಗಿದೆ, ಅದರಂತೆ ಜಿಲ್ಲೆಯಲ್ಲಿರುವ 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕರೊನಾ ಲಸಿಕೆ ಹಾಕಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಕರೊನಾ ಲಸಿಕೆಗೆ ಸಂಬಂಧಿಸಿದ ಜಿಲ್ಲಾ ಟಾಸ್ಕ್‌ರ್ಪೋಸ್ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 45 ವರ್ಷಕ್ಕೂ ಮೇಲ್ಪಟ್ಟ ಸುಮಾರು 3,45,032 ಜನರಿಗೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಲಸಿಕೆ ಹಾಕುವ ಮೂಲಕ ಅಭಿಯಾನ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

ಆರೋಗ್ಯ ಕಾರ್ಯಕರ್ತೆಯರಿಗೆ ಶೇ.89% ಮೊದಲ ಡೋಸ್ ಹಾಕಲಾಗಿದೆ, ಹಾಗೆಯೇ ಸ್ವ ಸಹಾಯ ಸಂಘಗಳ ಸದಸ್ಯರು ಮತ್ತು ಕುಟುಂಬದವರು, ಅಲ್ಪಸಂಖ್ಯಾತ ಸಮುದಾಯದವರು ಲಸಿಕೆ ಪಡೆಯಲು ಜಾಗೃತಿ ಮೂಡಿಸುವ ಜತೆಗೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕನಿಷ್ಠ 100 ಜನರಿಗೆ ಲಸಿಕೆ ಹಾಕಿಸಬೇಕು ಎಂದರು.

ಬೆಂಗಳೂರಿನಲ್ಲಿ ದಿನೇದಿನೆ ಹೊಸ ಪ್ರಕರಣಗಳು ಹೆಚ್ಚಾಗುತ್ತಿವೆ. ಚಿಕ್ಕಬಳ್ಳಾಪುರಕ್ಕೆ ಬೆಂಗಳೂರು ತುಂಬಾ ಹತ್ತಿರ ಇರುವುದರಿಂದ ಪ್ರತಿ ನಿತ್ಯ ಸಾವಿರಾರು ಜನರು ಸಂಚರಿಸುವುದರಿಂದ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಯಿದ್ದು ಮಾರ್ಗದರ್ಶಿ ನಿಯಮಗಳನ್ನು ಪಾಲಿಸಬೇಕೆಂದು ಲತಾ ಕಟ್ಟನಿಟ್ಟಿನ ನಿರ್ದೇಶನ ನೀಡಿದರು.

ಮುಲಾಜಿಲ್ಲದೆ ದಂಡ ವಿಧಿಸಿ : ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಈ ಭಾಗದಲ್ಲಿ ಪ್ರಕರಣಗಳು ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡುವ ಜತೆಗೆ ನಿಯಮ ಉಲ್ಲಂಘಿಸುವವರಿಗೆ ಮುಲಾಜಿಲ್ಲದೇ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಲತಾ ಸೂಚಿಸಿದರು.