ಜಿಲ್ಲೆ

ಕರಾವಳಿಯಲ್ಲಿ 345 ಕರೊನಾ ಕೇಸ್

ಮಂಗಳೂರು/ಉಡುಪಿ: ಕರಾವಳಿಯಲ್ಲಿ ಭಾನುವಾರ 345 (ದ.ಕ.163, ಉಡುಪಿ 182) ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ದ.ಕ.ದಲ್ಲಿ ಮೃತಪಟ್ಟ 10 ಮಂದಿಯಲ್ಲೂ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ 107 ಮಂದಿ ಮಂಗಳೂರು, ಬಂಟ್ವಾಳದ 13, ಬೆಳ್ತಂಗಡಿಯ 19, ಪುತ್ತೂರಿನ 11, ಸುಳ್ಯದ 11, ಇತರ ಜಿಲ್ಲೆಯ 9 ಹಾಗೂ ಇತರ ರಾಜ್ಯದ ಮೂವರು ಒಳಗೊಂಡಿದ್ದಾರೆ. ಮೃತಪಟ್ಟಿರುವ 10 ಮಂದಿಯೂ ಹಲವು ಕಾಯಿಲೆಗಳಿಂದ ಬಳಲುತ್ತಿದ್ದವರು. ಎಲ್ಲರಲ್ಲೂ ಸೋಂಕು ದೃಢಪಟ್ಟಿದೆ. ಇದುವರೆಗಿನ ಒಟ್ಟು ಕರೊನಾ ಪ್ರಕರಣ 6015 ತಲಪಿದ್ದರೆ ಸಕ್ರಿಯ ಪ್ರಕರಣಗಳು 3116 ಆಗಿವೆ. ಭಾನುವಾರ 45 ಮಂದಿಯನ್ನು ಬಿಡುಗಡೆಗೊಳಿಸಲಾಗಿದ್ದು ಡಿಸ್ಚಾರ್ಜ್ ಆದವರ ಸಂಖ್ಯೆ 2730 ತಲಪಿದೆ.

ಉಡುಪಿ ಜಿಲ್ಲೆಯ 75, ಕುಂದಾಪುರದ 55, ಕಾರ್ಕಳದ 51 ಮಂದಿ ಸೋಂಕು ಬಾಧಿತರು. ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎಲ್ಲೂರಿನ 54 ವರ್ಷದ ಮಹಿಳೆ ಮೃತಪಟ್ಟಿದ್ದು, ಅವರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4672ಕ್ಕೆ ಏರಿದೆ. 78 ಮಂದಿ ಸೋಂಕಿನಿಂದ ಗುಣವಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 625 ಮಂದಿಯ ವರದಿ ನೆಗೆಟಿವ್ ಬಂದಿದೆ. ಇದುವರೆಗೆ 2696 ಮಂದಿ ಸೋಂಕಿನಿಂದ ಸಂಪೂರ್ಣ ಗುಣವಾಗಿದ್ದಾರೆ. ಇನ್ನೂ 616 ಮಂದಿಯ ವರದಿ ಬರಲು ಬಾಕಿ ಇದೆ. 1943 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ 113 ಪ್ರಕರಣ

ಕಾಸರಗೋಡು: ಜಿಲ್ಲೆಯ 113 ಮಂದಿ ಒಳಗೊಂಡಂತೆ ಕೇರಳದಲ್ಲಿ 1,169 ಮಂದಿಗೆ ಕೋವಿಡ್-19 ರೋಗ ಬಾಧಿಸಿದೆ. ಇವರಲ್ಲಿ 43 ಮಂದಿ ವಿದೇಶದಿಂದ, 95 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. ಕಾಸರಗೋಡಿನ 110 ಮಂದಿ ಒಳಗೊಂಡಂತೆ ಕೇರಳದಲ್ಲಿ 991 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.

ದುಬೈ, ದೋಹಾದಿಂದ ವಿಮಾನ

ಮಂಗಳೂರು: ವಿದೇಶಗಳಲ್ಲಿರುವ ವಲಸಿಗರು ಭಾರತಕ್ಕೆ ಮರಳುವ ಪ್ರಕ್ರಿಯೆ ಮುಂದುವರಿದಿದ್ದು, ಭಾನುವಾರ ದುಬೈ ಮತ್ತು ದೋಹಾದಿಂದ ತಲಾ ಒಂದು ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ದುಬೈಯಿಂದ ಹೊರಟ ಇಂಡಿಗೋ ಚಾರ್ಟರ್ ವಿಮಾನ ಮಧ್ಯಾಹ್ನ ಮಂಗಳೂರು ತಲುಪಿದೆ. ಈ ವಿಮಾನದಲ್ಲಿ 174 ಪ್ರಯಾಣಿಕರು ಆಗಮಿಸಿದ್ದಾರೆ. ದೋಹಾ(ಕತಾರ್)ದಿಂದ ರಾತ್ರಿ 9 ಗಂಟೆಗೆ ಮಂಗಳೂರು ತಲುಪಿದ ಏರ್ ಇಂಡಿಯಾ ವಿಮಾನದಲ್ಲಿ 175 ಪ್ರಯಾಣಿಕರಿದ್ದರು. ವಿಮಾನ ಪ್ರಯಾಣಿಕರ ನಿರ್ವಹಣೆ ಜವಾಬ್ದಾರಿಯನ್ನು ಪ್ರೊಬೆಷನರಿ ಸಹಾಯಕ ಆಯುಕ್ತ ದೇವರಾಜ್ ವಹಿಸಿದ್ದರು.