ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸ್ವತ್ತುದಾರರು ಪ್ರಸಕ್ತ ಸಾಲಿನಲ್ಲಿ ಆಸ್ತಿತೆರಿಗೆ ಪಾವತಿಸುವ ಗಡುವು ಬುಧವಾರ ಮುಕ್ತಾಯವಾಗಿದ್ದು, ಒಟ್ಟು 3,400 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಒಂದು ಬಾರಿ ಇತ್ಯರ್ಥ (ಒಟಿಎಸ್) ಯೋಜನೆ ಸೇರಿ ತೆರಿಗೆ ಪಾವತಿಸಲು ಹೆಚ್ಚುವರಿ ಸಮಯ ನೀಡುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಏಪ್ರಿಲ್‌ನಿಂದ ನಾಲ್ಕು ತಿಂಗಳು ಕಾಲ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಡಲಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಸಮಯವನ್ನು ಆಸ್ತಿದಾರರಿಗೆ ನೀಡಲಾಗಿತ್ತು. ಆದರೆ, ಒಟಿಎಸ್ ಅಡಿಯಲ್ಲಿ 770 ಕೋಟಿ ರೂ. ಪೈಕಿ ಶೇ.60 ಹಣ ಮಾತ್ರ ಪಾವತಿಯಾಗಿದೆ. ಉಳಿದವರು ಪಾವತಿಸಿಲ್ಲ. ಬುಧವಾರ ಮಧ್ಯರಾತ್ರಿ 12ರ ವರೆಗೂ ಆನ್‌ಲೈನ್‌ನಲ್ಲಿ ತೆರಿಗೆ ಪಾವತಿಸಲು ಅವಕಾಶ ನೀಡಿರುವ ಕಾರಣ ಗುರುವಾರ ಸಂಜೆ ವೇಳೆ ಒಟ್ಟು ಮೊತ್ತದ ನಿಖರತೆ ತಿಳಿಯಲಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಎಆರ್‌ಒ ಕಚೇರಿಗಳಲ್ಲಿ ನೂಕುನುಗ್ಗಲು:
ಕೊನೆಯ ದಿನ ತೆರಿಗೆ ಪಾವತಿಸಲು ಹೆಚ್ಚಿನ ಮಂದಿ ಪಾಲಿಕೆ ಕಚೇರಿಗಳಿಗೆ ಆಗಮಿಸುವ ನಿರೀಕ್ಷೆಯನ್ನು ಬಿಬಿಎಂಪಿ ಹೊಂದಿತ್ತು. ಇದನ್ನು ಗಮನಿಸಿಯೇ ರಾತ್ರಿ 9ರ ವರೆಗೆ ವಲಯ ಕಚೇರಿಗಳು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳ (ಎಆರ್‌ಒ) ಕಚೇರಿಗಳು ತೆರೆದಿದ್ದವು. ಮಧ್ಯಾಹ್ನದ ನಂತರ ಆಸ್ತಿದಾರರು ತೆರಿಗೆ ಪಾವತಿಸಲು ಒಂದೇ ಸಮಯದಲ್ಲಿ ಆಗಮಿಸಿದ್ದ ಕಾರಣ ನೂಕುನುಗ್ಗಲು ಉಂಟಾಯಿತು. ಕೆಲವರು ಓಟಿಎಸ್ ಮೊತ್ತವನ್ನು ಲೆಕ್ಕಾಚಾರ ಮಾಡಿ ಪಾವತಿಸಲು ಪ್ರಯಾಸಪಟ್ಟರು.
ಸಮಯ ವಿಸ್ತರಣೆಗೆ ಮನವಿ:
ಓಟಿಎಸ್ ಸೇರಿ ಆಸ್ತಿತೆರಿಗೆ ಪಾವತಿಸಲು ಉದ್ದಿಮೆದಾರರಿಗೆ ದಾಖಲಾತಿ ಹೊಂದಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಆ.31ರವರೆಗೂ ಸಮಯ ವಿಸ್ತರಣೆ ಮಾಡುವಂತೆ ಬೆಂಗಳೂರು ಹೋಟೆಲುದಾರರ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಪಾಲಿಕೆಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಆಮ್ ಆದ್ಮಿ ಪಕ್ಷದ ನಗರ ಘಟಕವು ಕೂಡ ತೆರಿಗೆ ಪಾವತಿಸಲು ಹೆಚ್ಚುವರಿ ಸಮಯವನ್ನು ನೀಡಬೇಕು. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಚಂದ್ರ ಒತ್ತಾಯಿಸಿದ್ದಾರೆ.