ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಎಪಿಎಂಸಿಗೆ ಗುರುವಾರ ಅಂದಾಜು 34 ಸಾವಿರ ಚೀಲ ಒಣಮೆಣಸಿನಕಾಯಿ ಆವಕವಾಗಿತ್ತು. ಟೆಂಡರ್ನಲ್ಲಿ ಬೆಳೆಗಾರರಿಗೆ ಉತ್ತಮ ದರವೂ ಸಿಕ್ಕಿದೆ.
ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳಲ್ಲದೆ ಈ ಬಾರಿ ವಿಶೇಷ ಎಂದರೆ ತೆಲಂಗಾಣ ರಾಜ್ಯದಿಂದಲೂ ಹುಬ್ಬಳ್ಳಿಗೆ ಮೆಣಸಿನಕಾಯಿ ಬಂದಿದೆ ಎಂದು ಎಪಿಎಂಸಿ ಅಧ್ಯಕ್ಷ ಸುರೇಶ ಕಿರೇಸೂರ ತಿಳಿಸಿದ್ದಾರೆ.
ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಾಲ್ಗೆ ಕನಿಷ್ಠ 40,189 ರೂಪಾಯಿಯಿಂದ ಗರಿಷ್ಠ 51,119 ರೂಪಾಯಿವರೆಗೆ ಮಾರಾಟವಾಯಿತು. ಕಡ್ಡಿ ಮೆಣಸಿನಕಾಯಿ ಪ್ರತಿ ಕ್ವಿಂಟಾಲ್ಗೆ ಕನಿಷ್ಠ 2009 ರೂಪಾಯಿಯಿಂದ ಗರಿಷ್ಠ 38,819 ರೂಪಾಯಿ ವರೆಗೆ ಮಾರಾಟವಾಗಿದೆ.
ಕಳೆದ ಗುರುವಾರ ಹುಬ್ಬಳ್ಳಿ ಎಪಿಎಂಸಿಗೆ ದಾಖಲೆ ಮಟ್ಟದ ಮೆಣಸಿನಕಾಯಿ ಆವಕ ವಾಗಿತ್ತು. 42 ಸಾವಿರ ಚೀಲ ಮೆಣಸಿನಕಾಯಿ ಆವಕವಾಗಿದ್ದರಿಂದ ಅಂಗಡಿಗಳಲ್ಲಿ ಇಳಿಸಿಕೊಳ್ಳಲು ಸಾಧ್ಯವಾಗದೇ ಸಮಸ್ಯೆ ಉಂಟಾಗಿತ್ತು. ಎಪಿಎಂಸಿಯ ರಸ್ತೆಗಳ ತುಂಬೆಲ್ಲ ಮೆಣಸಿನಕಾಯಿ ಚೀಲ ಇಡಲಾಗಿತ್ತು. ಇದರ ಪರಿಣಾಮವಾಗಿ ಕಳೆದ ಶನಿವಾರ ಹಾಗೂ ಸೋಮವಾರ ಎರಡು ದಿನ ಮೆಣಸಿನಕಾಯಿ ಟೆಂಡರ್ ರದ್ದುಪಡಿಸಲಾಗಿತ್ತು. ತೂಕವಾಗಿ ವಿಲೇವಾರಿಯಾದ ನಂತರ ಇದೀಗ ಮತ್ತೆ ಟೆಂಡರ್ ಪ್ರಕ್ರಿಯೆ ನಡೆಯಿತು.