ಉಡುಪಿ: ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ನಡುವೆಯೂ, ಹಲವರಲ್ಲಿ ಕರೊನಾ ನೆಗೆಟಿವ್ ರಿಪೋರ್ಟ್ ಬರುತ್ತಿರುವುದು ಜನರಿಗೆ ಸಮಾಧಾನ ನೀಡಿದೆ.
ಶುಕ್ರವಾರ 34 ಪ್ರಕರಣ ಸೋಂಕು ದೃಢಪಟ್ಟಿದ್ದರೆ, 673 ಮಂದಿಯ ವರದಿ ನೆಗೆಟಿವ್ ಬಂದಿದೆ. ಬ್ರಹ್ಮಾವರ 4, ಉಡುಪಿ-ಕಾರ್ಕಳ ತಲಾ 4, ಬೈಂದೂರು 11, ಕುಂದಾಪುರ 6, ಕಾಪು 5 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಬೆಂಗಳೂರು, ದುಬೈನಿಂದ ತಲಾ ಇಬ್ಬರು, ಕುವೈತ್‌ನಿಂದ ಒಬ್ಬರು, ಮುಂಬೈನಿಂದ ಬಂದ ಮೂವರಿಗೆ ಸೋಂಕು ತಗುಲಿದೆ. ಒಂದು ಗಂಡು, ಒಂದು ಹೆಣ್ಣು ಮಗು ಸೇರಿ 10 ಮಹಿಳೆಯರು, 22 ಪುರುಷರು ಸೋಂಕಿಗೆ ಒಳಗಾಗಿದ್ದಾರೆ. ಸ್ಥಳೀಯ ಪ್ರಾಥಮಿಕ ಸಂಪರ್ಕದಿಂದ ಸೋಂಕು ವೇಗವಾಗಿ ಹಬ್ಬುತ್ತಿರುವ ಸಾಧ್ಯತೆ ಕಂಡುಬರುತ್ತಿದೆ. ಶುಕ್ರವಾರ ಪ್ರಾಥಮಿಕ ಸಂಪರ್ಕದ ಮೂಲಕ 26 ಮಂದಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1477ಕ್ಕೆ ಏರಿಕೆಯಾಗಿದೆ.
2424 ಮಂದಿಯ ವರದಿ ಬಾಕಿ: ಜಿಲ್ಲೆಯಲ್ಲಿ ಮಾದರಿ ಸಂಗ್ರಹ ಪ್ರಮಾಣವೂ ಹೆಚ್ಚುತ್ತಿದೆ. 2,424 ಮಂದಿಯ ವರದಿಯ ಫಲಿತಾಂಶ ಬರಲು ಬಾಕಿ ಇದೆ. ಅಜ್ಜರಕಾಡು ಜಿಲ್ಲಾಸ್ಪತ್ರೆಯ ಕೋವಿಡ್ ಲ್ಯಾಬ್‌ನಲ್ಲಿ ಶೀಘ್ರ ಕೋವಿಡ್-19 ಮಾದರಿ ಪರೀಕ್ಷೆ ಆರಂಭಗೊಳ್ಳಲಿದೆ. ಶುಕ್ರವಾರ 698 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಜಿಲ್ಲೆಯ ವಿವಿಧ ವಿಶೇಷ ಕೋವಿಡ್ ಆಸ್ಪತ್ರೆಗಳಿಂದ 7 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈಗಾಗಲೆ 1224 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 250 ಸಕ್ರಿಯ ಪ್ರಕರಣಗಳಿವೆ.