ರಾಮನಗರ : ವಿವಿಧತೆಯಲ್ಲಿ ಏಕತೆ ಸ್ಥಾಪಿಸುವುದು ನಮ್ಮ ಭಾರತದ ಸಂಸ್ಕೃತಿ. ಚಿಂತನೆ ಮತ್ತು ಚರ್ಚೆಗೆ ಮುಕ್ತ ಅವಕಾಶ ನೀಡಿರುವುದು ನಮ್ಮ ಸಂಸ್ಕೃತಿಯ ಹಿರಿಮೆ. ಇಂತಹ ಸಂಸ್ಕೃತಿ ಬಗ್ಗೆ ತಾತ್ಸಾರ ಮನೋಭಾವ ಸರಿಯಲ್ಲ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀಸ್ವಾಮೀಜಿ ತಿಳಿಸಿದರು.
ನಗರದ ರಾಮನಗರ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತರ ಪರಿಷತ್ತಿನಿಂದ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅರ್ಚಕರು ಮತ್ತು ಪುರೋಹಿತರ ಸಮ್ಮೇಳನ ಹಾಗೂ ಬ್ರಾಹ್ಮಣ ವಧು-ವರರ ಸಮಾವೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಧಾರ್ಮಿಕ ವೈವಿಧ್ಯ ಅತ್ಯಂತ ಸಮರ್ಪಕವಾಗಿ ಆಚರಣೆಯಲ್ಲಿದೆ. ನಮ್ಮ ಧರ್ಮೀಯರೇ ನಮ್ಮ ಸಂಸ್ಕೃತಿ, ಆಚರಣೆಗಳ ಬಗ್ಗೆ ತಾತ್ಸಾರ ಭಾವನೆಯಿಂದ ನೋಡುತ್ತಿರುವುದು ಸರಿಯಲ್ಲ. ಬ್ರಾಹ್ಮಣ ಸಮುದಾಯ ಧರ್ಮ ಮತ್ತು ಆಧುನೀಕರಣದ ನಡುವೆ ನರಳುತ್ತಿದೆ. ಬ್ರಾಹ್ಮಣ ಸಮುದಾಯ ಎಲ್ಲ ವೃತ್ತಿಯಲ್ಲಿ ಗುರುತಿಸಿಕೊಳ್ಳುತ್ತಿದೆ. ಇದು ಸಂತಸದ ಸಂಗತಿ. ಆದರೆ, ಸಮುದಾಯ ಪ್ರಧಾನವಾದ ವೃತ್ತಿಯಿಂದ ದೂರ ಉಳಿಯುತ್ತಿದೆ. ಬ್ರಾಹ್ಮಣರು ನಮ್ಮ ಸಂಪ್ರದಾಯವನ್ನೂ ಪಾಲಿಸಬೇಕು, ಅನ್ಯರ ಆಚಾರ ವಿಚಾರಗಳನ್ನು ಗೌರವಿಸಬೇಕು ಎಂದರು.
ಬೆಂಗಳೂರಿನ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಬ್ರಾಹ್ಮಣ ಸಮುದಾಯ ಸಾಮಾಜಿಕ ಕ್ಷೇತ್ರದಲ್ಲಿ ಮುನ್ನೆಲೆಗೆ ಬರಬೇಕು. ಹಿಂದು ಸಮಾಜವನ್ನು ರಕ್ಷಣೆ ಮಾಡುವ ಜತೆಗೆ, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಬೆಳೆಸಬೇಕು. ಸಮುದಾಯದ ಯುವಕರಿಗೆ ಉತ್ತಮ ಅವಕಾಶ ಕಲ್ಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅರ್ಚಕರು ಮತ್ತು ಪುರೋಹಿತರ ಪರಿಷತ್ತಿನ ಅಧ್ಯಕ್ಷ ವಿಶ್ವೇಶ್ವರ ಭಟ್ ಮಾತನಾಡಿ, ಹಿಂದು ಸಮುದಾಯದ ಉಳಿವಿನಲ್ಲಿ ಬ್ರಾಹ್ಮಣ ಸಮಾಜದ ಪಾತ್ರ ಮುಖ್ಯವಾಗಿದೆ. ಹಿಂದಿನಿಂದಲೂ ಸಮುದಾಯದ ಬೇರುಗಳನ್ನು ಬ್ರಾಹ್ಮಣ ಸಮಾಜ ಗಟ್ಟಿಗೊಳಿಸುತ್ತಾ ಬಂದಿವೆ. ಇಂದಿನ ಬ್ರಾಹ್ಮಣ ಸಮಾಜ ನಮ್ಮ ಧರ್ಮಾಚರಣೆ, ಸಂಸ್ಕೃತಿ ಬಗ್ಗೆ ಯುವ ಪೀಳಿಗೆಯ ಜತೆಗೆ ಎಲ್ಲರಿಗೂ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದರು.
ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ, ಅರ್ಚಕ ಮತ್ತು ಪುರೋಹಿತ ಪರಿಷತ್ತಿನ ಜಿಲ್ಲಾಧ್ಯಕ್ಷ ಗಣೇಶ್ ಭಟ್, ಬ್ರಾಹ್ಮಣ ಸಮಾಜದ ಪ್ರಮುಖರಾದ ತ್ಯಾಗರಾಜ ಭಟ್, ಚಂದ್ರಶೇಖರ್, ರವೀಂದ್ರ ಹೇರ್ಳೆ, ಉಮೇಶ್ ಶಾಸ್ತ್ರಿ, ವಿಜಯಕುಮಾರ್, ಕೃಷ್ಣಜೋಷಿ, ವಿಶ್ವನಾಥ್, ಎಸ್.ಜಿ. ಪ್ರಸಾದ್, ರಾಘವೇಂದ್ರ ಮಯ್ಯ ಮತ್ತಿತರರು ಇದ್ದರು.