ಜಿಲ್ಲೆ

33 ಶ್ರೀಗಂಧ ತುಂಡುಗಳ ವಶ

ಬಾಲಮುರಳಿಕೃಷ್ಣ

ಕೊಳ್ಳೇಗಾಲ: ತಾಲೂಕಿನ ಮುಡಿಗುಂಡ ಗ್ರಾಮದ ಸೇತುವೆ ಬಳಿ ಶುಕ್ರವಾರ ರಾತ್ರಿ ಕಾರೊಂದರಲ್ಲಿ ಶ್ರೀಗಂಧ ಮರದ ತುಂಡುಗಳನ್ನು ಸಾಗಣೆ ಮಾಡುತ್ತಿದ್ದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 16 ಕೆಜಿ ತೂಕದ 33 ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.


ದಾಳಿ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಕಾರಿನ ಮಾಲೀಕ ಮೈಸೂರು ಮೂಲದ ಜಾಫರ್ ಷರೀಫ್ ಎಂದು ತಿಳಿದು ಬಂದಿದ್ದು, ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಮಾರುತಿ ಕಾರಿನಲ್ಲಿ ಶ್ರೀಗಂಧ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ 10.30 ರಲ್ಲಿ ಕೊಳ್ಳೇಗಾಲ ಬಫರ್ ವಲಯ ಹಾಗೂ ಕೊಳ್ಳೇಗಾಲ ವೈಲ್ಡ್ ಲೈಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಆರೋಪಿಗಳು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.


ಕಾರ್ಯಾಚರಣೆಯಲ್ಲಿ 33 ಶ್ರೀಗಂಧದ ತುಂಡುಗಳು, ಕಾರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬಿ.ಆರ್.ಟಿ. ಅರಣ್ಯ ಪ್ರದೇಶ ಆರ್‌ಎಫ್‌ಒ ವಾಸು, ಕೊಳ್ಳೇಗಾಲ ಬಫರ್ ವಯಲದ ಆರ್‌ಎಫ್‌ಒ ಭರತ್, ಅರಣ್ಯ ರಕ್ಷಕ ಈಶ್ವರಪ್ಪ ಮತ್ತಿತರಿದ್ದರು.