ಜಿಲ್ಲೆ

3200 ಎಕರೆ ಒತ್ತುವರಿ ತೆರವಿಗೆ ಸಿದ್ಧತೆ

ಎನ್.ಮುನಿವೆಂಕಟೇಗೌಡ ಕೋಲಾರ
ಜಿಲ್ಲಾದ್ಯಂತ 3,200 ಎಕರೆ ಅರಣ್ಯ ಭೂಮಿಯನ್ನು ಪ್ರಭಾವಿಗಳೂ ಸೇರಿದಂತೆ ಇತರರು ಒತ್ತುವರಿ ಮಾಡಿಕೊಂಡಿದ್ದು ಸದ್ಯದಲ್ಲೇ ಅರಣ್ಯ ಇಲಾಖೆ ಹಂತ ಹಂತವಾಗಿ ತೆರವಿಗೆ ಮುಂದಾಗಲಿದೆ. ಶ್ರೀನಿವಾಸಪುರ ತಾಲೂಕಿನಲ್ಲಿಯೇ 3044 ಎಕರೆ ಅರಣ್ಯ ಭೂಮಿಯನ್ನು 150ಕ್ಕೂ ಅಧಿಕ ಮಂದಿ ಒತ್ತುವರಿ ಮಾಡಿಕೊಂಡಿದ್ದು ಮೊದಲನೇ ಹಂತದಲ್ಲಿ 15 ಜನರಿಗೆ ನೋಟಿಸ್ ನೀಡಲಾಗಿದ್ದು, ಅವರಿಂದ ಉತ್ತರ ಬಾರದಿರುವ ಹಿನ್ನೆಲೆಯಲ್ಲಿ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಇನ್ನು ಜಿಲ್ಲೆಯ ಐದು ತಾಲೂಕುಗಳಲ್ಲಿ 156 ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ. ಒತ್ತುವರಿ ತೆರವುಗೊಳಿಸಲು ಅರಣ್ಯ ಇಲಾಖೆ ಇನ್ನೂ ಸಮಯ ನಿಗದಿಗೊಳಿಸಿಲ್ಲ.


ಶನಿವಾರ ತೆರವು ಸಾಧ್ಯತೆ: ಮೂಲಗಳ ಪ್ರಕಾರ ಮೊದಲನೇ ಹಂತದಲ್ಲಿ ತೆರವುಗೊಳಿಸಲು ಸಾಕಷ್ಟು ಪೊಲೀಸ್ ಮತ್ತು ಡಿ.ಆರ್.ತುಕಡಿಗಳನ್ನು ಸಜ್ಜು ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಅರೆ ಮಿಲಿಟರಿ ಪಡೆ ನಿಯೋಜಿಸಲು ತೀರ್ಮಾನಿಸಲಾಗಿದ್ದು, ಇದೇ ಶನಿವಾರ ಕಾರ್ಯಾಚರಣೆಗೆ ಮುಂದಾಗಬಹುದು ಎಂದು ತಿಳಿದುಬಂದಿದೆ.


ಒತ್ತುವರಿ ಗುರುತು: ಶ್ರೀನಿವಾಸಪುರ ತಾಲೂಕಿನಲ್ಲಿ ಯಾವ ಅರಣ್ಯ ಪ್ರದೇಶದಲ್ಲಿ ಎಷ್ಟು ಒತ್ತುವರಿಯಾಗಿರುವ ಗಡಿಯನ್ನು ಈಗಾಗಲೇ ಇಲಾಖೆಯವರು ದಿಶಾಂಕ್ ಆ್ಯಪ್ ಮೂಲಕ ಗುರುತಿಸಿದ್ದಾರೆ. ಅದರಲ್ಲಿ ಪ್ರಭಾವಿಗಳು ಎಷ್ಟು ಜನರಿದ್ದಾರೆಂಬುದರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಒತ್ತುವರಿ ಜಾಗದಲ್ಲಿ ಕೊಳವೆ ಬಾವಿಗಳು, ಕೋಳಿ ಾರಂ, ಮಾವಿನ ತೋಟಗಳಿದ್ದು ಇವುಗಳನ್ನು ತೆರವುಗೊಳಿಸಲು ನೋಟಿಸ್ ನೀಡಲಾಗಿದೆ.
ಚಿಂತಕುಂಟೆ ಅರಣ್ಯದಲ್ಲಿ ಹೆಚ್ಚು ಒತ್ತುವರಿ: ಶ್ರೀನಿವಾಸಪುರಕ್ಕೆ ಸೇರಿದ ಚಿಂತಕುಂಟೆ ಅರಣ್ಯ ಪ್ರದೇಶದಲ್ಲಿಯೇ ಹೆಚ್ಚು ಆಕ್ರಮಿಸಿಕೊಳ್ಳಲಾಗಿ ಉಳಿದಂತೆ ದಳಸನೂರು ಅರಣ್ಯ, ಮೋತ್ತಕಪಲ್ಲಿ ಸೇರಿ ತಾಲೂಕಿನಲ್ಲಿ 3,044 ಎಕರೆ ಒತ್ತುವರಿಯಾಗಿರುವುದನ್ನು ಅರಣ್ಯ ಇಲಾಖೆಯವರು ಪತ್ತೆ ಹಚ್ಚಿದ್ದಾರೆ.


ಪ್ರಭಾವಿಗಳೇ ಮುಂದು: ಅರಣ್ಯ ಒತ್ತುವರಿ ಮಾಡಿಕೊಂಡವರಲ್ಲಿ ರಾಜಕೀಯ ಮುಖಂಡರೇ ಮುಂದಿದ್ದು, ಸಂಬಂಧಿಕರ ಹೆಸರಿನಲ್ಲಿ ನೂರಾರು ಎಕರೆ ಜಮೀನಿಗೆ ಕಂದಾಯ ಇಲಾಖೆಯಿಂದ ದಾಖಲೆೆ ಪಡೆದು, ಇದರಲ್ಲಿ ಕೆಲವರು ಈಗಾಗಲೇ ಬೆಂಗಳೂರು ಮೂಲದ ಉದ್ಯಮಿಗಳಿಗೆ ಜಮೀನು ಮಾರಾಟ ಮಾಡಿರುವುದು ಪತ್ತೆಯಾಗಿದೆ.


ಶ್ರೀನಿವಾಸಪುರ ತಾಲೂಕಿನಲ್ಲಿ ಅತ್ಯಧಿಕ ಒತ್ತುವರಿ: ಇಡೀ ಜಿಲ್ಲೆಯ ಪೈಕಿ ಶ್ರೀನಿವಾಸಪುರ ತಾಲೂಕಿ ನಲ್ಲಿಯೇ ಹೆಚ್ಚು ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಸುಮಾರು 3044 ಎಕರೆ ಪ್ರದೇಶ ಒತ್ತುವರಿಯಾಗಿದ್ದು, ಬಹುಪಾಲು ತಾಲೂಕಿಗೆ ಸೇರಿದ ಪ್ರದೇಶವಾಗಿದೆ.

ಸ್ಯಾಟ್‌ಲೈಟ್ ಸರ್ವೇ ಮೂಲಕ ಅರಣ್ಯ ಪ್ರದೇಶದ ಗಡಿ ಗುರುತಿಸಲಾಗಿದೆ. ಅದರಲ್ಲಿ 15 ಜನ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕಂದಾಯ ಇಲಾಖೆಯಿಂದ ದಾಖಲೆ ಗಳನ್ನು ಪಡೆದಿರುವುದು ಪತ್ತೆಯಾಗಿದೆ. ನೋಟಿಸ್ ನೀಡಿ ಹಂತ ಹಂತವಾಗಿ ತೆರವು ಮಾಡಲಾಗುವುದು. ಈಗಾಗಲೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒತ್ತುವರಿ ಪ್ರದೇಶದಲ್ಲಿ ಕೋಳಿ ಾರಂ, ಕೊಳವೆ ಬಾವಿಗಳು ಮತ್ತು ಮಾವಿನ ಮರಗಳಿದ್ದು ಅವುಗಳನ್ನು ತೆರವುಗೊಳಿಸಲು ತಿಳಿಸಲಾಗಿದೆ, ಅವರಾಗಿಯೇ ತೆರವು ಮಾಡಿಕೊಂಡರೆ ಒಳ್ಳೆಯದು, ನಾವು ತೆರವು ಮಾಡಿದರೆ ಅದಕ್ಕೆ ತಗಲುವ ವೆಚ್ಚವನ್ನು ಒತ್ತುವರಿದಾರರೇ ಭರಿಸಬೇಕಾಗುತ್ತದೆ.
ಏಡುಕೊಂಡಲು, ಜಿಲ್ಲಾ ಅರಣ್ಯಾಧಿಕಾರಿ