ಜಿಲ್ಲೆ

ಉಡುಪಿಯಲ್ಲಿ ಕರೊನಾ ಸ್ಫೋಟ, ಒಂದೇ ದಿನ 32 ಮಂದಿಗೆ ಸೋಂಕು

ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಕರೊನಾ ಅಟ್ಟಹಾಸ ಮೆರೆದಿದ್ದು, ಒಂದೇ ದಿನ 32 ಪ್ರಕರಣ ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ ಶತಕ ದಾಟಿ 108 ತಲುಪಿದೆ.

ಭಾನುವಾರ 23 ಪ್ರಕರಣ ಪತ್ತೆಯಾಗಿರುವುದೇ ಇದುವರೆಗಿನ ಜಿಲ್ಲೆಯ ಅತ್ಯಧಿಕ ಪ್ರಕರಣವಾಗಿತ್ತು. ಸೋಮವಾರ ಬೆಳಗ್ಗೆ 16 ಹಾಗೂ ಸಾಯಂಕಾಲ ಮತ್ತೆ 16 ಮಂದಿಗೆ ಸೋಂಕು ತಗುಲಿರುವ ವರದಿ ಬಂದಿದೆ. ಇದರಲ್ಲಿ 27 ಮಂದಿ ಮಹಾರಾಷ್ಟ್ರದಿಂದ ಹಿಂತಿರುಗಿದವರು, ಇಬ್ಬರು ದುಬೈಯಿಂದ ವಾಪಸ್ಸಾದವರು, ಇತರರು ಇತರ ಸಂಪರ್ಕಗಳಿಂದ ಸೋಂಕು ತಗುಲಿಸಿಕೊಂಡವರಾಗಿದ್ದಾರೆ.

ಇದರಲ್ಲಿ 10 ಮಂದಿ ಮಕ್ಕಳೂ ಇದ್ದಾರೆ. ಎಲ್ಲರೂ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದು, ಈಗ ಕೋವಿಡ್-19 ವಿಶೇಷ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇವರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ.

ಜಿಲ್ಲೆಯಲ್ಲಿ ‌ಸೋಂಕಿತರ ಸಂಖ್ಯೆ 108ಕ್ಕೆ‌ಏರಿಕೆಯಾಗಿದ್ದು, ಇದರಲ್ಲಿ ಮೂವರು ಗುಣಮುಖರಾಗಿದ್ದಾರೆ, ಓರ್ವ ಮೃತಪಟ್ಟಿದ್ದಾರೆ. 104 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಮೂವರು ಪೊಲೀಸರಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ 100ಕ್ಕೂ ಅಧಿಕ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.