ಚಿಕ್ಕಮಗಳೂರು: ಸಂವಿಧಾನ ರಕ್ಷಣೆಗಾಗಿ ಬಹುಜನ ಸಮಾಜ ಪಕ್ಷ ರಾಜ್ಯಾದ್ಯಂತ ಸಂವಿಧಾನ ಸಂರಕ್ಷಣಾ ಅಭಿಯಾನ ಹಮ್ಮಿಕೊಂಡಿದೆ. ಇದಕ್ಕೆ ಕಾರ್ಯಕರ್ತರ ಜತೆಗೆ ಜನರು ಸಹಕಾರ ನೀಡಬೇಕು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಬಿಎಸ್ಪಿ ಬೂತ್ ಮಟ್ಟದ ಕಾರ್ಯಕರ್ತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬೈಕ್ ಜಾಥಾ ಸೇರಿದಂತೆ ಸಂವಿಧಾನ ಉಳಿಸುವ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅ.31ರಂದು ಶೃಂಗೇರಿ, ನ.1 ರಂದು ಚಿಕ್ಕಮಗಳೂರು ಮತ್ತು 5 ರಂದು ಮೂಡಿಗೆರೆಯಲ್ಲಿ ಅಭಿಯಾನ ಆಯೋಜಿಸಿದ್ದೇವೆ. ಬಿ.ಆರ್.ಅಂಬೇಡ್ಕರ್ ಸರ್ವಸ್ವವನ್ನೂ ತ್ಯಾಗ ಮಾಡಿ ಸತತ 10 ವರ್ಷಗಳ ಕಾಲ ಶ್ರಮಪಟ್ಟು ದೇಶದ ಸಂವಿಧಾನ ರಚಿಸಿದ್ದಾರೆ. ಕೆಳವರ್ಗದವರಿಗೆ ಹಕ್ಕು, ಮೀಸಲಾತಿ ಸೇರಿದಂತೆ ಸವಲತ್ತುಗಳನ್ನು ಒದಗಿಸಿ ಗೌರವದಿಂದ ಬದುಕುವಂತೆ ಮಾಡುವ ಅಂಬೇಡ್ಕರ್ ಅವರ ಕನಸು ಸಂವಿಧಾನದಲ್ಲಿ ಅಡಗಿದೆ ಎಂದರು.
ಅಂಬೇಡ್ಕರ್ ಋಣ ತೀರಿಸಬೇಕಾದರೆ ಚಳವಳಿ ನಡೆಸಬೇಕು. ಸಂವಿಧಾನದ ಉಳಿವಿಗೆ ಹೋರಾಟ ನಡೆಸಬೇಕು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಕೆಳವರ್ಗದ ಜನ ಮತ್ತು ಮಹಿಳೆಯರು ಗೌರವದಿಂದ ಬದುಕಲು ಸಾಧ್ಯವಾಗಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಬಹುಜನ ಚಳವಳಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಾಗಾರ ಮಹತ್ವದ್ದಾಗಿದೆ. ಕಾರ್ಯಕರ್ತರು ಇಲ್ಲಿ ಹೇಳುವ ವಿಚಾರಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಬೇಕು. ಬಹುಜನ ಚಳವಳಿಯ ರೂವಾರಿಗಳಾಗಬೇಕು ಎಂದು ಸಲಹೆ ನೀಡಿದರು.