ಜಿಲ್ಲೆ

31ಕ್ಕೆ ರಾಷ್ಟ್ರೀಯ ಪಲ್ಸ ಪೋಲಿಯೋ ಅಭಿಯಾನ, 1,25,024 ಮಕ್ಕಳಿಗೆ ಲಸಿಕೆ ಹಾಕುವ ಗುರಿ

ಚಿಕ್ಕಬಳ್ಳಾಪುರ: ಜ.31ರಂದು ಮೊದಲ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ನಡೆಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ 5 ವರ್ಷದೊಳಗಿನ 1,25,024 ಮಂದಿ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ.

ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾದ್ಯಂತ 649 ಬೂತ್‌ಗಳನ್ನು ಗುರುತಿಸಲಾಗಿದ್ದು, 2,568 ಮಂದಿ ಸಿಬ್ಬಂದಿ ಹಾಗೂ 132 ಸೂಪರ್‌ವೈಜರ್‌ಗಳನ್ನು ನಿಯೋಜಿಸಲಾಗಿದೆ ಎಂದು ಗುರುವಾರ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್. ಕಬಾಡೆ ತಿಳಿಸಿದರು.

ಕಾರ್ಯಕ್ರಮದ ಮೊದಲನೇ ದಿನ ಪೋಲಿಯೋ ಬೂತ್‌ಗಳಲ್ಲಿ, ನಂತರದ 2-3 ದಿನಗಳಲ್ಲಿ ಮನೆ ಮನೆ ಭೇಟಿಯ ಮೂಲಕ ಎಲ್ಲ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಜಾಥಾ ನಡೆಸುವ ಮೂಲಕ ಅರಿವು ಮೂಡಿಸಲಾಗುತ್ತದೆ ಎಂದರು.

ಲಸಿಕಾ ದಿನ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಸಕ್ರಿಯವಾಗಿ ಭಾಗವಹಿಸಬೇಕು. ತಾಯಂದಿರ ಸಭೆಯಲ್ಲಿ ಲಸಿಕೆಯ ಬಗ್ಗೆ ಮೊದಲೇ ಮಾಹಿತಿ ನೀಡಿರಬೇಕೆಂದು ತಾಕೀತು ಮಾಡಿದರು.

ಜ.30ರಿಂದ ಕುಷ್ಠರೋಗ ಅರಿವು ಆಂದೋಲನ: ಚಿಕ್ಕಬಳ್ಳಾಪುರವನ್ನು ಕುಷ್ಠರೋಗಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಡಲಾಗಿದೆ. ಈ ನಿಟ್ಟಿನಲ್ಲಿ ಜ.30 ರಿಂದ ೆ.13ರವರೆಗೆ ಜಿಲ್ಲೆಯಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಇಂದಿರಾ ಆರ್. ಕಬಾಡೆ ತಿಳಿಸಿದ್ದಾರೆ. ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೂ ತೆರಳಿ ರೋಗದ ಲಕ್ಷಣಗಳ ಅರಿವು ಮೂಡಿಸಬೇಕು. ರೋಗಿಗಳು ಕಂಡುಬಂದಲ್ಲಿ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು. ವ್ಯಕ್ತಿಯ ದೇಹದ ಮೇಲೆ ತಿಳಿ ಬಿಳಿ ಅಥವಾ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡು ಬಂದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷಿಸಿಕೊಳ್ಳಬೇಕು. ಕುಷ್ಠರೋಗವು ಸಂಪೂರ್ಣವಾಗಿ ಗುಣವಾಗುವ ಕಾಯಿಲೆಯಾಗಿದ್ದು, ಬಹುವಿಧ ಔಷಧ ಮತ್ತು ಚಿಕಿತ್ಸೆ ಉಚಿತವಾಗಿದೆ ಎಂದರು.