ಜಿಲ್ಲೆ

ಯಾವ ಹುಡ್ಗಿಯೂ ಮದ್ವೆಗೆ ಒಪ್ಪಲಿಲ್ಲ ಎಂದು ಬೇಸತ್ತ ಯುವಕ ಆತ್ಮಹತ್ಯೆ!

ಬೆಂಗಳೂರು: ನೋಡಿದ ಹುಡುಗಿಯರೆಲ್ಲರೂ ತನ್ನನ್ನು ಮದುವೆ ಆಗಲು ನಿರಾಕರಿಸುತ್ತಿದ್ದುದರಿಂದ ಬೇಸತ್ತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ನರಳಿ ಸಾವಿಗೀಡಾಗಿದ್ದಾನೆ.

ನವೀನ್ (31) ಎಂಬಾತ ಆತ್ಮಹತ್ಯೆ ಮಾಡಿಕೊಂಡವ. ಬೆಂಗಳೂರಿನ ಆರ್​ಎಂಸಿ ಯಾರ್ಡ್ ಬಳಿ ಈ ದುರ್ಘಟನೆ ನಡೆದಿದೆ. ಮೂಲತಃ ಆಂಧ್ರಪ್ರದೇಶದವರಾದ ಇವರ ಕುಟುಂಬ ಬೆಂಗಳೂರಿಗೆ ವಲಸೆ ಬಂದು ವಾಸವಿತ್ತು. ನವೀನ್​ ಪೀಣ್ಯ ಬಳಿಯ ಗಾರ್ಮೆಂಟ್ಸ್​ವೊಂದರಲ್ಲಿ ಕ್ವಾಲಿಟಿ ಕಂಟ್ರೋಲರ್ ಆಗಿ ಕೆಲಸ ಮಾಡುತ್ತಿದ್ದ.

ನವೀನ್​ಗೆ ಬಲಗೈ ಅಷ್ಟು ಸ್ವಾಧೀನದಲ್ಲಿ ಇರದ್ದರಿಂದ ಅದು ದುರ್ಬಲವಾಗಿತ್ತು. ಹೀಗಾಗಿ ಆತ ಎಡಗೈಯನ್ನು ಬಳಸುತ್ತಿದ್ದ. ಮದುವೆಗೆಂದು ನೋಡಿದ ಹುಡುಗಿಯರೆಲ್ಲ ಈತನ ದುರ್ಬಲ ಬಲಗೈಯನ್ನು ನೋಡಿ ಮದುವೆಗೆ ನಿರಾಕರಿಸಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಬೇಸತ್ತು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ನಡೆಸಿದ ತನಿಖೆ ವೇಳೆ ತಿಳಿದು ಬಂದಿದೆ.

ನವೀನ್ ಇಂದು ಪೀಣ್ಯದ ಪೆಟ್ರೋಲ್ ಬಂಕ್​ವೊಂದರಲ್ಲಿ ಪೆಟ್ರೋಲ್ ಖರೀದಿಸಿ ಬಳಿಕ ಅಲ್ಲಿನ ಐಟಿಐ ಕಾಲೇಜು ಕಾಂಪೌಂಡ್ ಬಳಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಆತನ ಚೀರಾಟ ಕೇಳಿದ ಸ್ಥಳೀಯರು ತಕ್ಷಣ ಇಎಸ್‌ಐ ಆಸ್ಪತ್ರೆಗೆ ದಾಖಲಿಸದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೆಸರಘಟ್ಟರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನವೀನ್ ಮೃತಪಟ್ಟಿದ್ದಾನೆ.

ಆದರೆ ಆತನ ಕುಟುಂಬಸ್ಥರು ಕೆಲಸದ ವೇಳೆ ಏನೋ ಅವಘಡ ಆಗಿ ಸಾವಿಗೀಡಾಗಿದ್ದಾನೆ, ಸಂಸ್ಥೆಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆರ್​ಎಂಸಿ ಯಾರ್ಡ್​ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.