ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಡಿ.28ಕ್ಕೆ ಸಾವಿರ ದಿನ ಪೂರೈಸುತ್ತಿದ್ದು, ಡಿ.30ರಂದು ಚನ್ನರಾಯಪಟ್ಟಣದಿಂದ ಗ್ರಾಮಾಂತರ ಜಿಲ್ಲಾಡಳಿತ ಭವನದವರೆಗೂ ಸಹಸ್ರಾರು ರೈತರು, ವಕೀಲರು, ಕನ್ನಡ ಪರ, ದಲಿತ ಸೇರಿ ಹತ್ತುಹಲವು ಸಂಘಟನೆಗಳ ಸಹಯೋಗದಲ್ಲಿ ಪಾದಯಾತ್ರೆ ಮೂಲಕ ತೆರಳಿ, ಅನಿರ್ದಿಷ್ಠಾವಧಿ ಧರಣಿ ಮುಂದುವರಿಸಲಾಗುವುದು ಎಂದು ರೈತ ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.
ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯ ಉಳಿವಿಗಾಗಿ ಹಮ್ಮಿಕೊಂಡಿರುವ ಭೂ ಸ್ವಾಧೀನ ವಿರೋಧಿ ಹೋರಾಟ 989 ದಿನ ಪೂರೈಸಿದ್ದು, ದೆಹಲಿಯಲ್ಲಿನ ರೈತ ಹೋರಾಟವನ್ನೂ ಹಿಂದಿಕ್ಕಿದೆ. ಧರಣಿ ನಿರತ 71 ರೈತ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದ್ದ ಸರ್ಕಾರ ಮೌನಕ್ಕೆ ಜಾರಿದೆ. ಕ್ರಿಮಿನಲ್ ಪ್ರಕರಣ ಹಿಂಪಡೆದುಕೊಳ್ಳುವಂತೆ ಸರ್ಕಾರ, ಸಚಿವರು ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಮಾಡಲಾಗಿದೆ. ಆದರೂ ಸರ್ಕಾರ ಮಾತ್ರ ರೈತರ ಕಣ್ಣಿಗೆ ಮಣ್ಣು ಎರಚುತ್ತಾ ನಮ್ಮ ಹೋರಾಟದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು.
ಪೊಲೀಸ್ ಬಂಧನಕ್ಕೂ ಜಗ್ಗಲ್ಲ: ಚನ್ನರಾಯಪಟ್ಟಣದ ಹೋರಾಟವನ್ನು ಡಿಸಿ ಕಚೇರಿ ಮುಂದೆ ಮುಂದುವರಿಸಲಾಗುವುದು. ಅಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ನಾವು ಯಾವ ಬೆದರಿಕೆಗೂ ಬಗ್ಗುವುದಿಲ್ಲ. ಪೊಲೀಸರ ಬಂಧನಕ್ಕೂ ಜಗ್ಗುವುದಿಲ್ಲ. ರಸ್ತೆ ತಡೆ, ಡಿಸಿ ಕಚೇರಿಗೆ ಮುತ್ತಿಗೆ ಸೇರಿ ವಿವಿಧ ರೀತಿ ಹೊರಾಟ ನಡೆಸುತ್ತೇವೆ. ಸರ್ಕಾರ ಭೂಸ್ವಾಧಿನ ಆದೇಶ ಹಿಂಪಡೆಯುವವರೆಗೂ ಹೋರಾಟ ನಿಲ್ಲದು ಎಂದು ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.
ರೈತರ ನಡಿಗೆ ಡಿಸಿ ಕಚೇರಿ ಕಡೆಗೆ: ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ಯುವ ಘಟಕದ ಅಧ್ಯಕ್ಷ ಡಾ.ಬಿ.ಕೆ.ವಿನೋದಕುಮಾರಗೌಡ ಮಾತನಾಡಿ, ಚನ್ನರಾಯಪಟ್ಟಣ ರೈತರನ್ನು ಭೂಸ್ವಾಧೀನದಿಂದ ಮುಕ್ತಿಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಯಾವುದೇ ಹೋರಾಟ, ಮುತ್ತಿಗೆ ಆಯೋಜನೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದ ಮೇಲಿನ ಭರವಸೆಯೊಂದಿಗೆ, ಚನ್ನರಾಯಪಟ್ಟಣ ಹೋಬಳಿಯ ಎಲ್ಲ ರೈತರು ಕೃಷಿ ಭೂಮಿಯ ರಕ್ಷಣೆಗೆಗಾಗಿ ‘ರೈತರ ನಡಿಗೆ ಡಿಸಿ ಕಚೇರಿ ಕಡೆಗೆ’ ಎಂದು ಶಾಂತಿಯುತ ಹೆಜ್ಜೆ ಹಾಕಲಿದ್ದಾರೆ ಎಂದರು.
ಕರವೇ ಗೌರವಾಧ್ಯಕ್ಷ ಡಾ.ಎನ್.ಚಂದ್ರಶೇಖರ್, ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಆಂಜನೇಯರಡ್ಡಿ, ಪ್ರಾಂತ ರೈತ ಸಂಘದ ಚಂದ್ರ ತೇಜಸ್ವಿ, ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ವೆಂಕಟನಾರಾಯಣಪ್ಪ, ಡಿಎಸ್‌ಎಸ್ ಸಂಚಾಲಕರಾದ ತಿಮ್ಮರಾಯಪ್ಪ, ನರಸಪ್ಪ, ನಂಜಪ್ಪ, ಮಾರೇಗೌಡ, ಟಿ.ರವಿ, ಎನ್.ಬಿ. ಮಂಜುನಾಥ, ಪ್ರಭಾವತಮ್ಮ, ಮುಖಂಡರಾದ ಅಶ್ವತ್ಥಪ್ಪ, ಸತೀಶ್, ಗೋಪಿನಾಥ್, ಲೋಕೇಶ್ ,ಪ್ರಕಾಶ್, ಮುನಿರಾಜು, ಮುನೇಗೌಡ, ಮುಕುಂದ್, ಲಕ್ಷ್ಮಮ್ಮ, ನಾರಾಯಣಮ್ಮ, ವೆಂಕಟಮ್ಮ, ಪಿಳ್ಳಪ್ಪ, ಮೋಹನ್, ವೆಂಕಟರಮಣಪ್ಪ ಇದ್ದರು.