ಜಿಲ್ಲೆ

30ರಂದು ಹುತಾತ್ಮದ ದಿನದ ಅಂಗವಾಗಿ ಸೌಹಾರ್ದತಾ ಮಾನವ ಸರಪಳಿ

ಹಾಸನ: ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಗಾಂಧಿ ಹುತಾತ್ಮ ದಿನದ ಅಂಗವಾಗಿ ಕಾರ್ಯಕ್ರಮ ನಡೆಯುವಂತೆ ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಜನವರಿ 30 ರಂದು ಸಂಜೆ 4 ಗಂಟೆಗೆ ಸೌಹಾರ್ದತಾ ಮಾನವ ಸರಪಳಿ ಹಾಗೂ ಸಭೆ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.
ಇಂದು ವಿವೇಕ- ಅವಿವೇಕ, ಸತ್ಯ-ಅಸತ್ಯ, ವಿಚಾರ-ವಿಕಾರಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಮನುಷ್ಯ-ಮನುಷ್ಯರ ನಡುವಿನ ಕಂದಕ ಹೆಚ್ಚಾಗುತ್ತಿದೆ. ಈ ಕಂದಕದ ಒಳಗಿಂದ ಬರುತ್ತಿರುವ ಕರುಳ ಬಳ್ಳಿಯ ಕರೆ ಕ್ಷೀಣ ದನಿಯಾಗುತ್ತಿದೆ. ಹೊರಗಿನ ಅನುಚಿತ ಗದ್ದಲದಲ್ಲಿ ಕರುಳ ಬಳ್ಳಿಯ ಮಾನವೀಯ ಕರೆ ಕೇಳಿಸದಂತಾಗಿದೆ. ಇಂಥ ಕಳವಳಕಾರಿ ವಾತಾವರಣದಲ್ಲಿ ಸೌಹಾರ್ದವನ್ನು ಮುನ್ನೆಲೆಗೆ ತರಲು ಎಲ್ಲ ಕ್ಷೇತ್ರಗಳ ಮಾನವೀಯ ಮನಸ್ಸುಗಳು ಮುಂದಾಗಬೇಕಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಿರಿಯ ಸಾಹಿತಿ ಭಾನು ಮುಷ್ತಾಕ್ ಮಾತನಾಡಿ, ಹಲವು ದಶಕಗಳಿಂದಲೂ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೆಮ್ಮೆಯಿಂದ ಕರೆಯುತ್ತಾ ಬಂದ ಹಿರಿಮೆಗೆ ಈಗಾಗಲೇ ಗಂಭೀರ ಧಕ್ಕೆ ಬಂದೊದಗಿರುವುದು ನಿಚ್ಚಳವಾಗಿದೆ. ಜನರನ್ನು ಮತಾಂಧತೆಯ ಆಧಾರದಲ್ಲಿ ಜಾತಿ-ಮತ ಧರ್ಮಗಳ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳಿಂದ ನಮ್ಮ ಸಾಮಾಜಿಕ ಸೌಹಾರ್ದತೆಗೆ ತೀವ್ರವಾದ ಹಾನಿಯಾಗಿದೆ. ಮತೀಯ ದ್ವೇಷ-ಹಗೆತನದ ಭಾವನೆಗಳು ಸಾಮಾನ್ಯ ಜನರ ಮನಸ್ಸನ್ನು ಆವರಿಸಿಕೊಳ್ಳುತ್ತಿರುವ ವಿಷಮ ಗಳಿಗೆಯಲ್ಲಿ ನಾವು ಹಾದು ಹೋಗುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ದೇವರು, ಮತ-ಧರ್ಮ ಮುಂತಾದವುಗಳನ್ನು ಸಂಕುಚಿತ ಉದ್ದೇಶಗಳಿಗೆ ಎಗ್ಗಿಲ್ಲದೇ ಬಳಸಲಾಗುತ್ತಿದೆ. ಒಟ್ಟಿಗೆ ಹೋಗುವ ನಿಟ್ಟಿನಲ್ಲಿ ಪ್ರಗತಿಪರ ಮುಖಂಡರು, ವಿವಿಧ ಸಂಘಟನೆಗಳು, ರೈತರು, ಧಾರ್ಮಿಕ ಅಲ್ಪಸಂಖ್ಯಾತ ಸಂಘಟನೆಗಳು ಸಹಕಾರ ನೀಡಿದ್ದು, ಬರಗೂರು ರಾಮಚಂದ್ರಪ್ಪ, ಮಾವಳ್ಳಿ ಶಂಕರ್ ಎಲ್ಲರೂ ಸೇರಿ ದೊಡ್ಡ ಮಟ್ಟದಲ್ಲಿ ಜನವರಿ 30 ರಂದು ಮಹಾತ್ಮ ಗಾಂಧಿ ಹುತಾತ್ಮ ದಿನದಂದು ಇಡೀ ರಾಜ್ಯಾದ್ಯಂತ ಸೌಹಾರ್ದ ಮಾನವ ಸರಪಳಿಯನ್ನು ನಿರ್ಮಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಸುದ್ದಿಯಲ್ಲಿ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸಂಚಾಲಕ ಅಂಬೂಗ ಮಲ್ಲೇಶ್, ಕ್ರೈಸ್ತ ಮುಖಂಡ ಸುರೇಶ್, ಹಿರಿಯ ಪತ್ರಕರ್ತ ವೆಂಕಟೇಶ್, ಆಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಸೌಹಾರ್ದ ವೇದಿಕೆಯ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ ಉಪಸ್ಥಿತರಿದ್ದರು.