ಜಿಲ್ಲೆ

30ಕ್ಕೆ ಸಲೀಂ ಅಹಮ್ಮದ್ ಸಮಾಲೋಚನಾ ಸಭೆ

ಶಿವಮೊಗ್ಗ: ಕೆಪಿಸಿಸಿ ಕಾರ್ಯಾಧ್ಯಕ್ಷ, ಜಿಲ್ಲೆಯ ವಲಯ ಅಧ್ಯಕ್ಷರೂ ಆದ ಸಲೀಂ ಅಹಮ್ಮದ್ ಮೇ 30ರ ಬೆಳಗ್ಗೆ 10.30ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸುವರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

ಕರೊನಾ ನಡುವೆಯೂ ಪಕ್ಷ ಯಾವ ರೀತಿ ಕೆಲಸ ಮಾಡಿದೆ ಎಂಬ ಕುರಿತು ಮುಖಂಡರೊಂದಿಗೆ ಚರ್ಚೆ ನಡೆಸುವರು. ಮುಂದಿನ ದಿನಗಳಲ್ಲಿ ಪ್ರತಿಪಕ್ಷವಾಗಿ ಏನೇನು ಮಾಡಬೇಕಿದೆ ಎಂಬುದನ್ನು ಮನವರಿಕೆ ಮಾಡಲಿದ್ದಾರೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜೂ.7ಕ್ಕೆ ಡಿಕೆಶಿ ಪದಗ್ರಹಣ: ಡಿ.ಕೆ.ಶಿವಕುಮಾರ್ ಜೂ.7ರಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರ್ಯಕರ್ತರು ಬೆಂಗಳೂರಿಗೆ ಬರದಂತೆ ಈಗಾಗಲೇ ಸೂಚಿಸಿದ್ದು, ಜಿಲ್ಲಾ ಕೇಂದ್ರ, ವಲಯ ಕಚೇರಿ, ಗ್ರಾಪಂ ಮಟ್ಟದಲ್ಲಿ ಕುಳಿತು ಜೂಮ್ ಆಪ್ ಮೂಲಕ ಪದಗ್ರಹಣ ಸಮಾರಂಭ ವೀಕ್ಷಣೆ ಮಾಡಬಹುದು ಎಂದು ಹೇಳಿದರು.

ಕೇಂದ್ರ, ರಾಜ್ಯದ ಪರಿಹಾರ ಬೋಗಸ್: ಸರ್ಕಾರ ಘೊಷಣೆ ಮಾಡಿರುವ ಪರಿಹಾರ ಹಣ ಯಾವ ವರ್ಗದವರಿಗೂ ತಲುಪಿಲ್ಲ. ಇದು ಸಂಪೂರ್ಣ ಬೋಗಸ್. ಈ ವಿಚಾರದಲ್ಲಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಲಸೆ ಕಾರ್ವಿುಕರ ಅವ್ಯವಸ್ಥೆಯನ್ನು ಸರಿಪಡಿಸಿಲ್ಲ ಎಂದು ಎಚ್.ಎಸ್.ಸುಂದರೇಶ್ ದೂರಿದರು.

ವಲಸೆ ಕಾರ್ವಿುರಿಗೆ ಹಾಗೂ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ವಿವಿಧ ವರ್ಗಗಳಿಗೆ ಘೊಷಿಸಿರುವ 20 ಲಕ್ಷ ಕೋಟಿ ರೂ. ಹಂಚುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಪರಿಹಾರ ಪಡೆಯಲು ನೂರೆಂಟು ನಿರ್ಬಂಧ ವಿಧಿಸಲಾಗಿದೆ. ವೆಂಟಿಲೇಟರ್, ಪಿಪಿಇ ಕಿಟ್ ಹಾಗೂ ಗ್ಲೂಕೋಸ್ ಖರೀದಿಯಲ್ಲೂ ಭ್ರಷ್ಟಾಚಾರ ನಡೆಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿರುವುದು ಅನುಮಾನ ವ್ಯಕ್ತವಾಗುತ್ತಿದೆ ಎಂದರು.

ಕರೊನಾ ಸಂಕಷ್ಟದಲ್ಲಿ ಇತಂಹ ಭ್ರಷ್ಟಾಚಾರ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಮೌನ ವಹಿಸಿರುವುದು ಭಯ ಹುಟ್ಟಿಸುತ್ತಿದೆ. ವಿದ್ಯುಚ್ಛಕ್ತಿ ಪ್ರಸರಣಗಳನ್ನು ಖಾಸಗಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿರುವುದು ನೋವಿನ ಸಂಗತಿ. ಕರೊನಾ ಸಂಕಷ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ್ದು ಜನ ವಿರೋಧಿ ತೀರ್ಮಾನ ಎಂದು ಕಿಡಿಕಾರಿದರು.

ಗ್ರಾಪಂ ಚುನಾವಣೆಗೆ ಹೋಗಲಿ: ಗ್ರಾಪಂ ಚುನಾವಣೆ ನಡೆಸುವ ಬದಲು ಅಧಿಕಾರ ಸಮಿತಿ ನೇಮಿಸುತ್ತಿರುವುದು ಖಂಡನೀಯ. ಅವಧಿ ಮುಗಿದಿರುವ ಕಾರಣ ತಕ್ಷಣವೇ ಚುನಾವಣೆಗೆ ಹೋಗಬೇಕು ಎಂದರು. ಸಾಗರದಲ್ಲಿ ಸೋನಿಯಾ ಗಾಂಧಿ ವಿರುದ್ಧ ದಾಖಲಾದ ಎಫ್​ಐಆರ್ ಹಿಂಪಡೆಯುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ವನವಾಗಬೇಕು. ಅದರಲ್ಲಿ ಕಾನೂನಿನ ತೊಡಕುಗಳಿದ್ದು ಬಿಜೆಪಿಗೆ ಬಿಟ್ಟ ವಿಚಾರ ಎಂದರು.