ಜಿಲ್ಲೆ

307 ಹಳ್ಳಿಗಳಿಗಿದೆ ಕಂದಾಯ ಗ್ರಾಮದ ಅರ್ಹತೆ

222ಕ್ಕೆ ಅಂತಿಮ ಅಧಿಸೂಚನೆಯ ಪ್ರಸ್ತಾವನೆ | ಅನುಮೋದನೆ ದೊರೆತರೆ ಜನರಿಗೆ ಅನುಕೂಲ


ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು 307 ಗ್ರಾಮಗಳು ಅರ್ಹವಾಗಿದ್ದು, ಈ ಪೈಕಿ 222 ಹಳ್ಳಿಗಳಿಗೆ ಅಂತಿಮ ಅಧಿಸೂಚನೆಯ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಕಂದಾಯ ಇಲಾಖೆಗೆ ಸಲ್ಲಿಸಿದೆ.
ಇಲ್ಲಿ 157 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 1515 ಗ್ರಾಮಗಳಿದ್ದು ಹೆಚ್ಚಿನ ಜನವಸತಿ ಹೊಂದಿದ್ದರೂ ಸಮೀಪದ ಊರಿನ ಹೆಸರಿನಲ್ಲಿ ಗುರುತಿಸಲ್ಪಡುತ್ತಿರುವ ಪ್ರದೇಶಗಳನ್ನು ನಿಯಮಾನುಸಾರ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.

ಅಧಿಸೂಚನೆಯ ಪ್ರಸ್ತಾವನೆಗಳು
ಕಂದಾಯ ಗ್ರಾಮ ೋಷಣೆಗೆ ಜಿಲ್ಲೆಯಲ್ಲಿ 292 ಗ್ರಾಮಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರ ಪೈಕಿ 275 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಹಾಗೆಯೇ ಅಂತಿಮ ಅಧಿಸೂಚನೆಗೆ ಸಂಬಂಧಿಸಿದಂತೆ 253 ಗ್ರಾಮಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರ ಪೈಕಿ 222 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. 31 ಗ್ರಾಮಗಳು ಬಾಕಿ ಇವೆ.

ತಾಲೂಕುವಾರು ಗ್ರಾಮಗಳು
ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಲು ಅರ್ಹ ಹೊಂದಿರುವ ಹೆಚ್ಚಿನ ಹಳ್ಳಿಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ತಾಲೂಕುಗಳ ಪೈಕಿ ಚಿಕ್ಕಬಳ್ಳಾಪುರ (144 ಗ್ರಾಮಗಳು) ಮುಂಚೂಣಿಯಲ್ಲಿದೆ. ಬಳಿಕ ಗೌರಿಬಿದನೂರು (58 ಗ್ರಾಮಗಳು) ಎರಡನೇ ಸ್ಥಾನದಲ್ಲಿದೆ. ಸಣ್ಣ ತಾಲೂಕು ಗುಡಿಬಂಡೆಯಲ್ಲಿ 18 ಗ್ರಾಮಗಳು ಅರ್ಹತೆ ಹೊಂದಿವೆ.


ಗ್ರಾಮಸ್ಥರಲ್ಲಿ ಅಭಿವೃದ್ಧಿಯ ನಿರೀಕ್ಷೆ
ಗ್ರಾಮೀಣ ಭಾಗದಲ್ಲಿ ಹೋಬಳಿ ಮತ್ತು ಗ್ರಾಪಂ ಕೇಂದ್ರಗಳು ಅಗತ್ಯ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಯನ್ನು ಕಾಣುತ್ತಿವೆ. ಆದರೆ, ಅನೇಕ ಹಳೇ ಕಂದಾಯ ಗ್ರಾಮಗಳೇ ರಸ್ತೆ, ಚರಂಡಿ, ಬೀದಿದೀಪ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಹದಗೆಟ್ಟ ರಸ್ತೆಗಳಿಂದ ಜನರ ಪ್ರಯಾಣಕ್ಕೆ ಸುವ್ಯವಸ್ಥಿತ ವಾಹನ ವ್ಯವಸ್ಥೆ ಇರುವುದಿಲ್ಲ. ಜನರು ಕಿಲೋಮೀಟರ್‌ಗಟ್ಟಲೇ ನಡೆಯುವುದು ಅನಿರ್ವಾಯವಾಗಿದೆ. ಇನ್ನು ದಾಖಲೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಯಡವಟ್ಟಿನಿಂದ ಈಗಲೂ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. ಊರಿನ ಅಂಕಿ-ಅಂಶಗಳ ಮಾಹಿತಿ ಲಭ್ಯತೆ ಮತ್ತು ಗುರುತಿಸುವಲ್ಲಿ ಸಮಸ್ಯೆ ಇಲ್ಲ. ಆದರೆ, ವೈಯಕ್ತಿಕ ದಾಖಲೆಗಳಲ್ಲಿನ ಲೋಪದೋಷಗಳು, ಸರಿಪಡಿಸುವಲ್ಲಿನ ವಿಳಂಬವು ದೊಡ್ಡ ತಲೆನೋವಿಗೆ ಕಾರಣವಾಗುತ್ತದೆ.


ಕಂದಾಯ ಗ್ರಾಮಗಳು ಎಂದರೇನು?
ಆಡಳಿತಾತ್ಮಕ ಉದ್ದೇಶದ ಹಿನ್ನೆಲೆಯಲ್ಲಿ ಭೂ ದಾಖಲೆಗಳಲ್ಲಿ ಮನ್ನಣೆಯ ಸರಹದ್ದುಗಳನ್ನು ಹೊಂದಿರುವ ಹಳ್ಳಿಗಳನ್ನು ಸರ್ಕಾರದಿಂದ ಅಧಿಕೃತವಾಗಿ ಕಂದಾಯ ಗ್ರಾಮಗಳನ್ನಾಗಿ ಗುರುತಿಸುವಂತಹುದಾಗುತ್ತದೆ. ಗ್ರಾಮ ನಕ್ಷೆ, ಆಕಾರ್ ಬಂದಿ, ಪಹಣಿ ಮತ್ತು ಇತರ ಭೂ ದಾಖಲೆಗಳನ್ನು ಹೊಂದಿರಲಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಜನವಸತಿ ಇರಬಹುದು, ಇಲ್ಲದಿರಬಹುದು. ಇದರ ವ್ಯಾಪ್ತಿಯಿಂದ ದೂರದಲ್ಲಿ ಜನವಸತಿ ಪ್ರದೇಶಗಳನ್ನು ಕೇವಲ ಹೆಸರಿಗೆ ಗ್ರಾಮಗಳನ್ನಾಗಿ ಪರಿಗಣಿಸಲಾಗುತ್ತಿರುತ್ತದೆ.
ಕಂದಾಯ ಗ್ರಾಮಗಳಲ್ಲಿ ಅದರದ್ದೇ ಆದ ಊರಿನ ಹೆಸರಿನಲ್ಲಿ ದಾಖಲೆಗಳು ಲಭ್ಯ, ಲಾನುಭವಿಗಳ ಗುರುತಿಸುವಿಕೆ ಮತ್ತು ಸೌಲಭ್ಯಗಳನ್ನು ಒದಗಿಸುವಂತಹುದಾಗುತ್ತದೆ. ಇದು ಆಡಳಿತಾತ್ಮಕವಾಗಿ ಜನರಿಗೆ ಅನುಕೂಲಕರವಾಗಿರುತ್ತದೆ.