ಜಿಲ್ಲೆ

ಕೆಎಸ್‌ಆರ್‌ಟಿಸಿಗೆ 300ನೇ ಪ್ರಶಸ್ತಿಯ ಗರಿ

ಮಂಜುನಾಥ.ಕೆ

ಬೆಂಗಳೂರು: ರಾಜ್ಯ ಸರ್ಕಾರದ ಪ್ರತಿಷ್ಠಿತ ಸಾರಿಗೆ ನಿಗಮವಾದ ಕೆಎಸ್‌ಆರ್‌ಟಿಸಿ ಮಡಿಲಿಗೆ ಈವರೆಗೂ 300 ಪ್ರಶಸ್ತಿಗಳು ಲಭಿಸಿವೆ. ಇದೀಗ ಸ್ಕಾಚ್ ಆರ್ಡರ್ ಆಫ್ ಮೆರಿಟ್ ೩ ಪ್ರಶಸ್ತಿ, ೧ ಸ್ಕಾಚ್ ಗವರ್ನೆಸ್ ಪ್ರಶಸ್ತಿ-೨೦೨೩ ಕೆಎಸ್‌ಆರ್‌ಟಿಸಿ ಪಾಲಿಗೆ ಒಲಿದಿದೆ.
ದೆಹಲಿ ಮೂಲದ ಸ್ಕ್ವಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು ೧೯೯೭ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು ೨೦೦೩ ರಿಂದ ಸ್ಕಾಚ್ ಪ್ರಶಸ್ತಿಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸ್ಕಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡುತ್ತದೆ.
ಕೆಎಸ್‌ಆರ್‌ಟಿಸಿ ನಿಗಮವು ಅನುಷ್ಠಾನ ಮಾಡಿರುವ ಕಾರ್ಮಿಕ ಕಲ್ಯಾಣ ಹಾಗೂ ಸಾಮಾಜಿಕ ಉಪಯುಕ್ತತೆಯ ೩ ಉಪಕ್ರಮಗಳಿಗೆ ಸ್ಕಾಚ್ ಅರ್ಡರ್ ಆಫ್ ಮೆರಿಟ್ ೩ ಪ್ರಶಸ್ತಿಯು ಲಭಿಸಿರುತ್ತದೆ ಹಾಗೂ ಒಂದು ಉಪಕ್ರಮವು ಸ್ಕಾಚ್ ಗವರ್ನೆಸ್ ಪ್ರಶಸ್ತಿಯನ್ನು ಸಹ ಪಡೆದಿದೆ.

  • ನಿಗಮದ ಸಿಬ್ಬಂದಿಗೆ ಜಾರಿಗೊಳಿಸಿರುವ ೧ ಕೋಟಿ ರೂ. ಅಪಘಾತ ಪರಿಹಾರ ವಿಮಾ ಯೋಜನೆಗೆ (ಸಾರಿಗೆ ಸುರಕ್ಷಾ ವಿಮಾ ಯೋಜನೆ) ಸ್ಕಾಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ ಮತ್ತು ಸ್ಕಾಚ್ ಗವರ್ನೆಸ್ ಪ್ರಶಸ್ತಿ ಲಭಿಸಿದೆ.
    *ವಾಹನಗಳ ಪುನಶ್ಚೇತನ ಯೋಜನೆಗೆ ಸ್ಕಾಚ್ ಆರ್ಡರ್ ಅಫ್ ಮೆರಿಟ್ ಪ್ರಶಸ್ತಿ.
    ಬಿಸಿನೆಸ್ ಇಂಟಲಿಜೆಂಟ್ ಡ್ಯಾಶ್ ಬೋರ್ಡ್ ಸ್ಕಾಚ್ ಆರ್ಡರ್ ಅಫ್ ಮೆರಿಟ್ ಪ್ರಶಸ್ತಿ ದೊರಕಿದೆ.