ಬೀದರ್: ಭಾಲ್ಕೇಶ್ವರ ಸಕ್ಕರೆ ಕಾರ್ಖಾ ನೆ ಅಧ್ಯಕ್ಷ ಮಾಜಿ ಶಾಸಕ ಪ್ರಕಾಶ ಖಂಡ್ರೆ 300 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಶುಕ್ರವಾರ ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಅವರಿಗೆ ಹಸ್ತಾಂತರಿಸಿದರು.
ಕರೊನಾ ವಿರುದ್ಧದ ಸಮರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ (ಹಸ್ತ ನಿರ್ಮಲಿಕಾರಕ) ಸಹ ಪ್ರಮುಖ ಪಾತ್ರ ವಹಿಸುತ್ತಿದೆ. ಅತ್ಯಧಿಕ ಬಳಕೆ, ಬೇಡಿಕೆ ಹೆಚ್ಚಳದಿಂದಾಗಿ ಸದ್ಯ ಎಲ್ಲೆಡೆ ಇದರ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಖಂಡ್ರೆ ಅವರು ಭಾಲ್ಕೇಶ್ವರ ಕಾರ್ಖಾನೆಯಲ್ಲಿ ಸ್ಯಾನಿಟೈಸರ್ ಉತ್ಪಾದನೆ ಮಾಡಿ ಜಿಲ್ಲಾಡಳಿತಕ್ಕೆ ವಿತರಿಸಿದ್ದಾರೆ. ಇವುಗಳನ್ನು ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿ ಕರೊನಾ ವಾರಿಯರ್ಸ್ಗಳ ಬಳಕೆಗೆ ನೀಡಲಾಗಿದೆ.
ಕರೊನಾ ಸೋಂಕು ತಡೆಗಟ್ಟಲು ಎಲ್ಲರೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಮಾಸ್ಕ್ ಬಳಸಬೇಕು. ಸಾನಿಟೈಸರ್ ಮೂಲಕ ಸದಾ ಕೈಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಕರೊನಾಗೆ ಇನ್ನೂ ಔಷಧ ಸಿಗದ ಕಾರಣ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಿ ಮಹಾಮಾರಿ ತಗುಲದಂತೆ ನೋಡಿಕೊಳ್ಳಬೇಕೆಂದು ಪ್ರಕಾಶ ಖಂಡ್ರೆ ಮನವಿ ಮಾಡಿದರು.
ಕರೊನಾಗೆ ಮಣಿಸಲು ಎಲ್ಲರೂ ಕೈಜೋಡಿಸುವ ಅಗತ್ಯವಿದೆ. ಈಗಾಗಲೇ ಬ್ರಿಮ್ಸ್ ವೈದ್ಯರಿಗಾಗಿ 100 ಪಿಪಿಇ ಕಿಟ್, 400 ಮಾಸ್ಕ್ ವಿತರಿಸಿದ್ದೇನೆ. ಬಡವರು, ನಿರ್ಗತಿಕರಿಗೆ ಆಹಾರ ಧಾನ್ಯ ಕಿಟ್ ವಿತರಿಸಲಾಗುತ್ತಿದೆ. ಶನಿವಾರ ಭಾಲ್ಕಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ತಲಾ 50 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುವುದು ಎಂದರು. ಡಿಸಿ ಮಹಾದೇವ ಅವರು ಖಂಡ್ರೆಯವರಿಗೆ ಜಿಲ್ಲಾಡಳಿತ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಕಾರ್ಖಾನೆ ನಿರ್ದೇಶಕ ರಾಚಪ್ಪ ಪಾಟೀಲ್, ಗುರುಪ್ರಸಾದ ಖಂಡ್ರೆ, ಶಂಕರರಾವ ಕೊಟ್ಟರಕಿ, ಅಬಕಾರಿ ಉಪ ಆಯುಕ್ತ ವೀರಣ್ಣ ಬಾಗೇವಾಡಿ ಇತರರಿದ್ದರು.