ಜಿಲ್ಲೆ

ಹಳ್ಳಿಕಾರ ಫೌಂಡೇಷನ್‌ನಿಂದ 300 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೆಂಗಳೂರು: ಆರ್.ಎಂ.ಆರ್( ರಂಗಮ್ಮ ಮುನಿರಂಗಪ್ಪ ) ಹಳ್ಳಿಕಾರ ಫೌಂಡೇಷನ್ ಟ್ರಸ್ಟ್ ವತಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಹಳ್ಳಿಕಾರ ಸಮುದಾಯದ 100 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

ಜು.26ರಂದು ತುಮಕೂರು, ಜು.27ರಂದು ಹಾಸನದಲ್ಲಿಯೂ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಪದವೀಧರರನ್ನು ಯುಪಿಎಸ್‌ಸಿ ಪರೀಕ್ಷೆಗೆ ಉಚಿತ ತರಬೇತಿ ಮತ್ತು ಪಠ್ಯ ಪುಸ್ತಕ, ವಿದ್ಯಾರ್ಥಿ ನಿಲಯದ ಹಣವನ್ನು ಸಂಪೂರ್ಣವಾಗಿ ಭರಿಸಲಾಗುತ್ತಿದೆ. ಈ ವರ್ಷವು ಎಷ್ಟೇ ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಲು ಮುಂದೆ ಬಂದರೆ ಟ್ರಸ್ಟ್ ಸಂಪೂರ್ಣ ಆರ್ಥಿಕ ಸಹಾಯ ಮಾಡಲಿದೆ.

ಜಯನಗರದ ಪೂರ್ಣೀಮಾ ಕನ್ವೆನ್‌ಷನ್ ಸೆಂಟರ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮಕ್ಕೆ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿ ಮಾತನಾಡಿ, ಮಕ್ಕಳು ಓದುವುದಕ್ಕೆ, ಪ್ರತಿಭೆ ಗುರುತಿಸಲು ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಸಹಕಾರಿಯಾಗಲಿದೆ. ಪ್ರತಿ ವರ್ಷ ಒಂದು ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಿ ನೂರಾರು ವಿದ್ಯಾರ್ಥಿಗಳನ್ನು ಪದವಿಧಾರರನ್ನಾಗಿ ಮಾಡುವ ಕಾರ್ಯ ಶ್ಲಾಘನೀಯ ಎಂದರು. ಎಲ್ಲರಲ್ಲಿಯೂ ಹಣವಿರುತ್ತದೆ. ಧಾರಾಳವಾಗಿ ಖರ್ಚು ಮಾಡಿ ಶಿಕ್ಷಣ, ಪದವಿಧಾರರನ್ನಾಗಿ ರೂಪಿಸುವ ಗುಣವಿರಬೇಕು ಅಂತಹ ಕೆಲಸದಲ್ಲಿ ಟ್ರಸ್ಟ್ ಮುಂದಾಗಿರುವುದು ಒಳ್ಳೆಯ ಕಾರ್ಯವಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಎಲ್ಲರೂ ಕಂಪ್ಯೂಟರ್ ಸೈನ್ಸ್ ಓದಲು ಹೋಗಬೇಡಿ, ಬೇರೆ ರೀತಿಯ ಉದ್ಯೋಗ ಕಂಡುಕೊಳ್ಳಲು ಹೊಸ ಸಂಶೋಧನೆ, ಪದವೀಧರರಾಗಬೇಕು. ವಿಜ್ಞಾನ, ಸ್ನಾತ್ತಕೋತ್ತರ ಶಿಕ್ಷಣವಂತರಾಗಬೇಕಾಗುವ ಮೂಲಕ ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕು. ತಂದೆ- ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕಿವಿಮಾತು ಹೇಳಿದರು.

ರಾಜಕೀಯ ವ್ಯಾಪಾರೀಕರಣವಾಗಿದೆ. ಪ್ರತಿಭೆ, ಸಮಾಜಮುಖಿ ಸೇವೆ ಮಾಡುವವರನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ಡಿ.ದೇವರಾಜ ಅರಸರು, ಎಂ.ವೀರಪ್ಪ ಮೊಯಿಲಿ ಅವರು ಕೆ.ಎಂ. ನಾಗರಾಜ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಮುಂದಾಗಿದ್ದರು. ಆದರೆ ನಾಗರಾಜ್ ಅವರು ಅದನ್ನು ತಿರಸ್ಕರಿಸಿದರು. ಅವರು ನೂರಾರು ನಾಯಕರನ್ನು ತಯಾರು ಮಾಡುವ ಕಾರ್ಖಾನೆಯಿದ್ದಂತೆ, ಅಧಿಕಾರಕ್ಕೋಸ್ಕರ ಸೇವೆ ಮಾಡುತ್ತಿಲ್ಲ ಎಂದರು.

ಆರ್‌ಎಂಆರ್ ಹಳ್ಳಿಕಾರ ಟ್ರಸ್ಟ್ ಅಧ್ಯಕ್ಷ ಕೆ.ಎಂ. ನಾಗರಾಜ್ ಮಾತನಾಡಿ, ಮಾತಾ-ಪಿತೃ ಅವರು ಕೂಡಿಟ್ಟಿರುವ ಹಣದಲ್ಲಿ ಸಮಾಜಕ್ಕೆ ಕಿರುಕಾಣಿಕೆ ನೀಡಲಾಗುತ್ತಿದೆ. ಹಳ್ಳಿಕಾರ ಸಮುದಾಯ ಕಡು ಬಡತನದಿಂದ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ, ಬಡತನ ಸಮುದಾಯ ಶಿಕ್ಷಣವಂತರಾಗಬೇಕು. ಐಎಎಸ್, ಕೆಎಎಸ್ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಮಾಡಲಾಗುತ್ತಿದೆ. ಈ ಮೂಲಕ ದೇವರನ್ನು ಕಾಣುವ ಕೆಲಸ ಮಾಡಲಾಗುತ್ತಿದೆ ಎಂದರು.

ಸಮಾಜಸೇವಕ ಬಿ. ಮಲ್ಲಿಕಾರ್ಜುನ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಹಿರಿಯ ಪತ್ರಕರ್ತ ರವೀಂದ್ರಭಟ್, ವಿಜಯನಗರದ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಅಧ್ಯಕ್ಷ ಬಿ.ಆರ್. ವಾಸುದೇವ್, ಹಳ್ಳಿಕಾರ ಜನಾಂಗದ ಅಧ್ಯಕ್ಷ ಮುನಿರಂಗಪ್ಪ, ಕಾರ್ಯದರ್ಶಿ ನಾರಾಯಣ ಮೂರ್ತಿ ಉಪಸ್ಥಿತರಿದ್ದರು.