ಭದ್ರಾವತಿ ವಿಐಎಸ್‌ಎಲ್ ಆವರಣದ ಇಸ್ಪಾತ್ ಭವನದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸೈಲ್ ಅಧ್ಯಕ್ಷ ಅಮರೇಂದ್ರ ಪ್ರಕಾಶ್ ಜತೆ ಸಮಾಲೋಚನೆ ನಡೆಸಿದರು ಬಿ.ವೈ.ರಾಘವೇಂದ್ರ, ಶಾರದಾ ಪೂರ‌್ಯಾನಾಯ್ಕಾ, ಎಸ್.ಎಲ್.ಭೋಜೇಗೌಡ, ಶಾರದಾ ಅಪ್ಪಾಜಿಗೌಡ ಇದ್ದರು. 
ಜಿಲ್ಲೆ

300 ಮಿಲಿಯನ್ ಟನ್ ಉತ್ಪಾದನೆ ಗುರಿ

ನವೀನ ಬಿ.ಎಂ

ಶಿವಮೊಗ್ಗ: 2017ರ ಪಾಲಿಸಿ ಪ್ರಕಾರ 2030ರ ವೇಳೆಗೆ ದೇಶದಲ್ಲಿ 300 ಮಿಲಿಯನ್ ಟನ್ ಕಬ್ಬಿಣ ಉತ್ಪಾದನೆ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಗುರಿ ಮುಟ್ಟಲು ಹಲವು ಯೋಜನೆಗಳನ್ನು ಆರಂಭಿಸಿದ್ದೇವೆ. ಅದಕ್ಕೆ ಪೂರಕವಾಗಿ ಎಲ್ಲ ತೀರ್ಮಾನಗಳನ್ನೂ ಮಾಡಲಿದ್ದು ಈ ಹಿನ್ನೆಲೆಯಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಕೇಂದ್ರ ಸಚಿವ ಜಯರಾಮ್ ರಮೇಶ್ ಅವರು ಭಾರತದ ಐದು ಕಾರ್ಖಾನೆ ಬಗ್ಗೆ ನನ್ನ ಮುಂದೆ ಐದು ಪ್ರಶ್ನೆ ಇಟ್ಟಿದ್ದರು. ಆ ಪ್ರಶ್ನೆಗೆ ಮಾಹಿತಿ ಪಡೆಯಲು ಭದ್ರಾವತಿ ವಿಐಎಸ್‌ಎಲ್ಗೆ ಭೇಟಿ ನೀಡಿದ್ದೆ. ಕಾರ್ಮಿಕರ ಬದುಕು, ಕಾರ್ಖಾನೆ ಉಳಿಸುವ ಕುರಿತು ಏನು ಮಾಡಬಹುದು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸುತ್ತೇನೆ ಎಂದರು.
ಕಾರ್ಖಾನೆಯನ್ನು ಬಂಡವಾಳ ಹೂಡಿಕೆ ಮತ್ತು ಮುಚ್ಚುವುದರಿಂದ ಹೊರತರಬೇಕೆಂಬುದು ಕಾರ್ಮಿಕರ ಒತ್ತಾಸೆ. ಈಗ ಕಾರ್ಮಿಕರಿಗೆ 13 ದಿನ ಕೆಲಸವಿದೆ. ಅದನ್ನು 26 ದಿನಗಳಿಗೆ ಏರಿಸಬೇಕೆಂಬ ಆಗ್ರಹವಿದ್ದು, ಈ ಎಲ್ಲ ಬೇಡಿಕೆಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ. ಆದರೆ ಕಾರ್ಖಾನೆ ಉಳಿವಿನ ಬಗ್ಗೆ ಸಾಧಕ-ಬಾಧಕ ಕ್ರೋಡೀಕರಿಸಿ ಮುಂದಿನ ದಿನಗಳಲ್ಲಿ ಏನು ಮಾಡಬಹುದೋ ಅದನ್ನು ಮಾಡುತ್ತೇನೆ. ಕಾರ್ಮಿಕರ ಬೇಡಿಕೆಗಳನ್ನು ಕಾನೂನು ವ್ಯಾಪ್ತಿಯೊಳಗೆ ಈಡೇರಿಸಲು ಸಾಧ್ಯವಾದರೆ ಬಗೆಹರಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.