ಜಿಲ್ಲೆ

30 ವರ್ಷಗಳ ಬಳಿಕ ಕೋಡಿ ಬಿದ್ದ ಮಳವಳ್ಳಿ ಕೆರೆ

ಗುಂಡ್ಲುಪೇಟೆ: ಬರೋಬ್ಬರಿ 30 ವರ್ಷಗಳ ಬಳಿಕ ತಾಲೂಕಿನ ಮಳವಳ್ಳಿ ಕೆರೆ ಗುರುವಾರ ಕೋಡಿ ಬಿದ್ದಿದ್ದು, ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ.

36 ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ಮಳವಳ್ಳಿ ಕೆರೆಯ ಬಹುತೇಕ ಭಾಗ ಅತಿಕ್ರಮಣಕ್ಕೊಳಗಾಗಿದೆ. ಅರ್ಧಕ್ಕೂ ಹೆಚ್ಚು ಪ್ರದೇಶ ಅರಣ್ಯಕ್ಕೆ ಸೇರಿಕೊಂಡಿದ್ದು, ಮಳೆಗಾಲದಲ್ಲಿ ನೀರು ಬರುತ್ತಿದ್ದ ಎಲ್ಲ ಮಾರ್ಗಗಳೂ ಬಂದ್ ಆಗಿದ್ದರಿಂದ ಕಳೆದ 30 ವರ್ಷಗಳಿಂದ ಕೆರೆ ತುಂಬಿರಲಿಲ್ಲ. ಇದರಿಂದ ಬೇಸಿಗೆ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಜನಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಬೇಸಾಯಕ್ಕೆ ತೀವ್ರ ತೊಂದರೆಯಾಗುತ್ತಿತ್ತು.

ಇತ್ತೀಚೆಗೆ ತಾಲೂಕಿನ ಬೇಗೂರು ಹೋಬಳಿಯ ಕಮರಹಳ್ಳಿ ಕೆರೆಯಿಂದ ಪೈಪ್‌ಲೈನ್ ಮೂಲಕ ಗರಗನಹಳ್ಳಿ, ಹಳ್ಳದಮಾದಹಳ್ಳಿ, ರಾಘವಾಪುರ ಕೆರೆಗಳಿಗೆ ನೀರು ತುಂಬಿಸಿದ ನಂತರ ಮಳವಳ್ಳಿ ಕೆರೆಗೆ ನೀರು ಹರಿಸಲಾಗಿದ್ದು, ಇದೀಗ ಕೋಡಿ ಬಿದ್ದಿದೆ. ಈ ನೀರು ಸಮೀಪದ ಬೆಂಡಗಳ್ಳಿ ಕೆರೆಯತ್ತ ಹರಿಯುತ್ತಿದೆ.

ಕೆರೆ ಕೋಡಿ ಬಿದ್ದಿರುವುದರಿಂದ ಮಳವಳ್ಳಿ ಸುತ್ತಲಿನ ಗ್ರಾಮಗಳಾದ ಮಾಡ್ರಹಳ್ಳಿ, ಹೆಗ್ಗಡಹಳ್ಳಿ, ಗರಗನಹಳ್ಳಿ, ಬೆಂಡಗಳ್ಳಿ, ವೀರನಪುರ ಸೇರಿದಂತೆ ಹಲವು ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದ್ದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. ಶುಕ್ರವಾರ ಕೆರೆಗೆ ಬಾಗಿನ ಸಲ್ಲಿಸಲು ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ.

ತಾಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸಲು ನಿರ್ಧರಿಸಿರುವ ಶಾಸಕ ಸಿ.ಎಸ್.ನಿರಂಜನಕುಮಾರ್, ಬೇಸಿಗೆಯಲ್ಲೂ ನದಿ ಮೂಲದಿಂದ ನೀರು ಹರಿಸಿದ ಪರಿಣಾಮ ಕೋಡಿ ಬಿದ್ದಿದೆ. ಶುಕ್ರವಾರ ಕೆರೆಗೆ ಬಾಗಿನ ಸಲ್ಲಿಸಲಾಗುವುದು ಎಂದು ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಮಾಡ್ರಹಳ್ಳಿ ಮಹೇಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.