ಜಿಲ್ಲೆ

ತ್ಯಾಮಗೊಂಡ್ಲು ಡೇರಿಗೆ 30 ಲಕ್ಷ ಲಾಭ, ಬಮುಲ್ ನಿರ್ದೇಶಕ ಭಾಸ್ಕರ್ ಮಾಹಿತಿ, ರೈತರಿಗೆ 14.23 ಲಕ್ಷ ಬೋನಸ್

ತ್ಯಾಮಗೊಂಡ್ಲು: ಜಿಲ್ಲೆಯಲ್ಲಿ ಹೆಚ್ಚಿನ ಹಾಲು ಉತ್ಪಾದನೆ ಮತ್ತು ಗುಣಮಟ್ಟದ ಹಾಲು ಸರಬರಾಜು ಮಾಡುವ ಡೇರಿಗಳಲ್ಲಿ ತ್ಯಾಮಗೊಂಡ್ಲು ಹಾಲು ಉತ್ಪಾದಕರ ಸಹಕಾರ ಸಂಘ ಮೊದಲ ಸ್ಥಾನದಲ್ಲಿದೆ. ಇದಕ್ಕೆ ರೈತರ ಕೊಡುಗೆ ಅಮೂಲ್ಯವಾದದ್ದು ಎಂದು ಬಮುಲ್ ನಿರ್ದೇಶಕ ಜಿ.ಆರ್. ಭಾಸ್ಕರ್ ಪ್ರಶಂಸಿಸಿದರು.

ಪಟ್ಟಣದ ಪಶುವೈದ್ಯ ಶಾಲೆ ಆವರಣದಲ್ಲಿ ಶುಕ್ರವಾರ ತ್ಯಾಮಗೊಂಡ್ಲು ಹಾಲು ಉತ್ಪಾದಕರ ಸಹಕಾರ ಸಂಘ ಆಯೋಜಿಸಿದ್ದ 2019-20ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಕೆಎಂಎಫ್ ಸಂಸ್ಥೆ ರೈತರಿಂದ ರೈತರಿಗೋಸ್ಕರ ಇರುವ ಸಂಸ್ಥೆ. ದೇಶದಲ್ಲಿ ಹಾಲು ಉತ್ಪಾದನೆಗೆ ಗುಜರಾತ್ ಬಿಟ್ಟರೆ ರಾಜ್ಯವೇ ಎರಡನೇ ಸ್ಥಾನದಲ್ಲಿದೆ. ರಾಸುಗಳ ಆರೋಗ್ಯ ಕಾಪಾಡಲು ಬಮುಲ್‌ನಿಂದ ವೈದ್ಯರ ನೇಮಕ ಮಾಡಿಕೊಂಡು ಮನೆಯಲ್ಲೇ ಸೇವೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

2019-20ನೇ ಸಾಲಿಗೆ ಸಂಘ 30 ಲಕ್ಷ ರೂ. ಲಾಭ ಗಳಿಸಿದೆ. ಇದರಲ್ಲಿ ಖರ್ಚು ಕಳೆದು 22 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.65 ಹಣವನ್ನು ಅಂದರೆ 14.23 ಲಕ್ಷ ಹಣವನ್ನು ಬೋನಸ್ ನೀಡಲಾಗುತ್ತಿದೆ ಎಂದು ಕಾರ್ಯದರ್ಶಿ ಟಿ.ದುರ್ಗದಯ್ಯ ಮಾಹಿತಿ ನೀಡಿದರು.

ನಿವೃತ್ತ ಕಾರ್ಯದರ್ಶಿಗೆ ಡೇರಿಯಿಂದ ಉಚಿತವಾಗಿ ಪ್ರತಿನಿತ್ಯ 2 ಲೀಟರ್ ಹಾಲು ನೀಡುವುದನ್ನು ರದ್ದುಪಡಿಸಬೇಕು. ಬೋನಸ್ ಹಣವನ್ನು ಬ್ಯಾಂಕ್ ಮೂಲಕ ನೇರ ವರ್ಗಾವಣೆ ಮಾಡದೆ ನಗದು ನೀಡುವಂತೆ, ಹೊಸದಾಗಿ ಹಸು ಖರೀದಿ ಮಾಡಿದಾಗ ವಿಮೆಯನ್ನು ಕೂಡ ವರ್ಗಾವಣೆ ಮಾಡುವ ನಿಯಮ ರೂಪಿಸುವಂತೆ ಸದಸ್ಯ ಹುಚ್ಚಣ್ಣ ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಡೇರಿ ಅಧ್ಯಕ್ಷ ಕುಮಾರ್, ನಿರ್ದೇಶಕರ ಸಭೆಯಲ್ಲಿ ಹಾಲು ನೀಡುತ್ತಿರುವ ವಿಷಯ ಚರ್ಚಿಸಿ ತೀರ್ಮಾನಿಸಲಾಗುವುದು, ಎಲ್ಲ ಹಣ ಪಾವತಿಯನ್ನು ಬ್ಯಾಂಕ್ ಮೂಲಕವೇ ಮಾಡಬೇಕೆಂದು ಸರ್ಕಾರದ ಆದೇಶವಿರುವುದರಿಂದ ಅದನ್ನು ಪಾಲಿಸಲೇಬೇಕು. ನಿರ್ದೇಶಕ ಜಿ.ಆರ್.ಭಾಸ್ಕರ್ ಅವರು ಈಗಾಗಲೇ ಬಮುಲ್ ಸಭೆಯಲ್ಲಿ ವಿಮೆ ವಿಷಯ ಪ್ರಸ್ತಾಪಿಸಿದ್ದು, ಆದಷ್ಟು ಬೇಗ ಅದರ ತಿದ್ದುಪಡಿ ಆಗಲಿದೆ ಎಂದು ತಿಳಿಸಿದರು.

ಜುಲೈನಲ್ಲಿ ನಿವೃತ್ತರಾದ ಕಾರ್ಯದರ್ಶಿ ಹನುಮಯ್ಯ ಅವರಿಗೆ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು.

ನಿರ್ದೇಶಕರಾದ ತೋಟನಹಳ್ಳಿ ಪ್ರಕಾಶ್, ಟಿ.ಸಿದ್ದರಾಜು, ಆರ್.ಶಂಕರ್. ಟಿ.ಆರ್, ಹನುಮಂತರಾಜು, ಬಸಪ್ಪ, ಕಾರೇಹಳ್ಳಿ ನಾಗೇಶ್, ನಾಮಿನಿ ಸದಸ್ಯ ಸಿ.ರಂಗರಾಜು ಗಿರಿಜಮ್ಮ, ಬಮುಲ್ ಉಪ ವ್ಯವಸ್ಥಾಪಕ ಆರ್.ಗೋಪಾಲ್‌ಗೌಡ, ವಿಸ್ತರಣಾಧಿಕಾರಿ ಡಿ ಚಂದನ್, ಕಷಿ ಅಧಿಕಾರಿ ವಿ.ಪಿ.ಪ್ರಸನ್ನಕುಮಾರ್, ಸಿಬ್ಬಂದಿ ಉಮೇಶ್, ಮಂಜುನಾಥ ಟಿ.ಸಿ., ಮಂಜುನಾಥ್.ಕೆ. ಇದ್ದರು.