ಕೋಲಾರ: ಮಡಿವಾಳ ಸಮಾಜದ ಸಮುದಾಯ ಭವನ, ವಸತಿ ನಿಲಯ ನಿಮಾರ್ಣಕ್ಕೆ ನನ್ನ ಹಾಗೂ ಎಂಎಲ್ಸಿಗಳಾದ ಇಂಚರ ಗೋವಿಂದರಾಜು ಮತ್ತು ಎಂ.ಎಲ್.ಅನಿಲ್ಕುಮಾರ್ ಅವರ ಅನುದಾನ ಸೇರಿ ತಲಾ 10 ಲಕ್ಷ ರೂ.ಗಳು ಸೇರಿ 30 ಲಕ್ಷ ರೂ. ಅನುದಾನ ನೀಡಲಾಗುವುದು. ಜತೆಗೆ ಸರ್ಕಾರದಿಂದಲೂ ವಿಶೇಷ ಅನುದಾನ ಕೊಡಿಸುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಮಾತನಾಡಿ, ಸಣ್ಣಪುಟ್ಟ ಸಮಾಜಗಳನ್ನು ಜತೆಯಲ್ಲಿ ಕರೆದುಕೊಂಡು ಹೋಗುವುದು ಜನಪ್ರತಿನಿಧಿಗಳ ಜವಾಬ್ದಾರಿ. ಪ್ರತಿಯೊಂದು ಸಮಾಜದಲ್ಲೂ ವಿದ್ಯಾವಂತರು ಮತ್ತು ಬುದ್ಧಿವಂತರು ಇರಬೇಕು. ತಮ್ಮ ಸಮುದಾಯಕ್ಕೆ ಆಗುವ ಅನ್ಯಾಯ ಹಾಗೂ ಸಮಸ್ಯೆಗಳನ್ನು ಕೇಳಿ ಪಡೆಯಲು ಸಾಧ್ಯವಾಗುತ್ತದೆ. ಸಮುದಾಯ ಭವನ ಹಾಗೂ ವಸತಿ ನಿಲಯ ನಿಮಾರ್ಣಕ್ಕೆ ಅವಶ್ಯಕತೆ ಇದ್ದರೆ ಉಳಿದ ಜನಪ್ರತಿನಿಧಿಗಳ ಕಡೆಯಿಂದಲೂ ಅನುದಾನ ಕೊಡಿಸಲು ಸಿದ್ದ ಎಂದರು. ಎಂಎಲ್ಸಿ ಅನಿಲ್ಕುಮಾರ್ ಮಾತನಾಡಿ, ಮೀಸಲಾತಿ ಸರ್ಕಾರದ ಹಂತದಲ್ಲಿ ತೀಮಾರ್ನವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಹ ಅಧಿವೇಶನದಲ್ಲಿ ನಿಮ್ಮ ಪರವಾಗಿ ಇರುತ್ತೇವೆ. ಸಮುದಾಯ ಅಭಿವೃದ್ಧಿಗೆ ಶಿಕ್ಷಣ ಮುಖ್ಯವಾಗಿದೆ. ವಸತಿ ನಿಲಯ ನಿಮಾರ್ಣ ಮಾಡಲು ಮುಂದಾಗಿ ನಾವು ಜತೆಗೆ ಇದ್ದು, ಅನುದಾನ ಕೊಡತ್ತೇವೆ ಎಂದರು. ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಮಡಿವಾಳ ಸಮುದಾಯವನ್ನು ಎಲ್ಲರೂ ಗೌರವಿಸಬೇಕಾಗಿದೆ. ಅವರನ್ನು ಕೀಳರಿಮೆಯಿಂದ ಕಾಣಬಾರದು. ಸಮುದಾಯವನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿಸುವ ವಿಚಾರದಲ್ಲಿ ಸಮುದಾಯದ ಪರ ಇದ್ದೇವೆ. ಸರ್ಕಾರದ ಮೇಲೆ ಒತ್ತಡ ತರುತ್ತೇವೆ, ಸಮುದಾಯ ಭವನ ನಿಮಾರ್ಣಕ್ಕೆ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಮಡಿವಾಳ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ವಿ.ಮಂಜುನಾಥ್ ಮಾತನಾಡಿ, ಸರ್ಕಾರದಿಂದ ನಮಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಬೇಕಾಗಿದೆ. ಕೋಲಾರದ ಧೋಬಿಘಾಟ್ನಲ್ಲಿ ಸಮುದಾಯ ಭವನವನ್ನು ನಿರ್ಮಿಸಿಕೊಡಬೇಕು ಹಾಗೂ ಅನ್ನಪೂರ್ಣಮ್ಮ ವರದಿಯನ್ನು ಸರ್ಕಾರಕ್ಕೆ ಮುಟ್ಟಿಸಿ ಎಸ್.ಸಿ.ಸಮುದಾಯಕ್ಕೆ ಸೇರುವಂತೆ ಮಾಡಬೇಕೆಂದು
ಮನವಿ ಮಾಡಿದರು.