ಜಿಲ್ಲೆ

ಫೈನಾನ್ಸ್​ ಸಂಸ್ಥೆಗಳ ನೋಂದಣಿಗೆ 30 ದಿನದ ಗಡುವು

ಉಡುಪಿ ಡಿಸಿ ವಿದ್ಯಾಕುಮಾರಿ ಸೂಚನೆ

ಬಲವಂತದ ಸಾಲ ವಸೂಲಿ ತಡೆಗೆ ಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್​ ಸಂಸ್ಥೆಗಳು, ಸಾಲ ನೀಡುವ ಏಜೆನ್ಸಿಗಳು, ಸಂಸ್ಥೆಗಳು (ಆರ್ಗನೈಜೇಷನ್​) ಅಥವಾ ಲೇವಾದೇವಿದಾರನು ನೀಡುವ ದುಬಾರಿ ಬಡ್ಡಿ ದರದ ಸಾಲವನ್ನು ಅನುಚಿತ ತೊಂದರೆ ಮತ್ತು ಬಲವಂತದ ವಸೂಲಾತಿ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಇರುವ ಎಲ್ಲ ಪ್ರಕಾರದ ಫೈನಾನ್ಸ್​ ಸಂಸ್ಥೆಗಳು ಸರ್ಕಾರದ ಆದೇಶದ ದಿನದಿಂದ 30 ದಿನದೊಳಗೆ ನೋಂದಣಿ ಪ್ರಾಧಿಕಾರದ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದ್ದಾರೆ.

ಡಾ. ಕೆ.ವಿದ್ಯಾಕುಮಾರಿ

ಆರ್ಥಿಕವಾಗಿ ದುರ್ಬಲ ಗುಂಪು, ವ್ಯಕ್ತಿಗಳು, ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಮತ್ತು ಬಲವಂತದ ವಸೂಲಾತಿಯಿಂದ ಮುಕ್ತಗೊಳಿಸಲು ಸರ್ಕಾರವು ರೂಪಿಸಿರುವ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ ) ಆಧ್ಯಾದೇಶಕ್ಕೆ 2025ರ ಫೆ.12ರಂದು ರಾಜ್ಯಪಾಲರ ಒಪ್ಪಿಗೆಯೂ ದೊರೆತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸಿಯೇ ನೋಂದಣಾಧಿಕಾರಿ

ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆದೇಶದ ಅನುಸಾರ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಯನ್ನೇ ನೋಂದಣಿ ಪ್ರಾಧಿಕಾರದ ಅಧಿಕಾರಿ ಎಂದು ಅಧಿಕೃತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ದೂರು ನೀಡಲು ಸಹಾಯವಾಣಿ ಕೇಂದ್ರ

ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲಗಳ ಬಲವಂತದ ಕ್ರಮಗಳ ಪ್ರತಿಬಂಧಕ ಆದೇಶ ನಿಯಮ ಉಲ್ಲಂಘಿಸುವ ಲೇವಾದೇವಿದಾರರ ವಿರುದ್ಧ ದೂರು ದಾಖಲಿಸಬಹುದು. ಅದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಗೂ ಪೊಲೀಸ್​ ಕಂಟ್ರೋಲ್​ ರೂಂ ಮೂಲಕ ಸಾರ್ವಜನಿಕ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಯಾರಿಗಾದರೂ ತೊಂದರೆ ಆಗಿದ್ದಲ್ಲಿ ಮುಕ್ತವಾಗಿ ದೂರು ದಾಖಲಿಸಿ, ಪರಿಹಾರ ಕಂಡುಕೊಳ್ಳಬಹುದು. ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ ನಂಬರ್​ 0820-2574802 (24×7) ಹಾಗೂ ಪೊಲೀಸ್​ ಕಂಟ್ರೋಲ್​ ರೂಂ ಸಂಖ್ಯೆ-112ಕ್ಕೆ ಕರೆ ಮಾಡಬಹುದು.