ಜಿಲ್ಲೆ

ಹತ್ತು ದಿನಗಳಲ್ಲಿ 30 ಮಸೂದೆ ಮಂಡನೆ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಸೆ.21ರಿಂದ ಆರಂಭವಾಗುವ 10 ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ 30 ಮಸೂದೆ ಮಂಡನೆಯಾಗಲಿದ್ದು, ಇದರಲ್ಲಿ 19 ಸುಗ್ರೀವಾಜ್ಞೆಗಳೂ ಸೇರಿವೆ.

ವಿಧೇಯಕ ಮಂಡಿಸಿ ಸದನದ ಅನುಮತಿ ಪಡೆಯಲು ಅತಿ ಕಡಿಮೆ ಕಾಲಾವಧಿ ಇರುವುದರಿಂದ ಅನುಮತಿ ಪಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಸರ್ಕಾರದ್ದು. ಕಾನೂನು ಇಲಾಖೆ ಈಗಾಗಲೇ ಮಸೂದೆಗಳ ಮಂಡನೆ ಕುರಿತಂತೆ ತಾಲೀಮು ಆರಂಭಿಸಿದೆ. ಪ್ರತಿಪಕ್ಷದಿಂದ ಎದುರಾಗಬಹುದಾದ ಸವಾಲುಗಳ ಬಗ್ಗೆಯೂ ವಿಧೇಯಕಗಳನ್ನು ಮುಂದಿಟ್ಟುಕೊಂಡು ಪ್ರಾಥಮಿಕ ಹಂತದ ಚರ್ಚೆಗಳು ನಡೆದಿವೆ.

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಬಿಡಿಎ ಕಾಯ್ದೆ ಸೇರಿ 19 ಸುಗ್ರೀವಾಜ್ಞೆಗಳಿಗೆ ಒಪ್ಪಿಗೆ ಪಡೆಯಲು ಪ್ರತಿಪಕ್ಷ ಅಷ್ಟು ಸುಲಭವಾಗಿ ಒಪು್ಪವುದಿಲ್ಲ ಎಂಬುದು ಸರ್ಕಾರಕ್ಕೂ ಅರಿವಿದೆ. ಹೀಗಾಗಿ ಪ್ರತಿಪಕ್ಷದ ಮನವೊಲಿಸಿ ಆರಂಭದಲ್ಲೇ ಮಸೂದೆಗಳನ್ನು ಮಂಡಿಸಿ, ಪ್ರತಿದಿನ ಒಂದೊಂದು ವಿಧೇಯಕ ಚರ್ಚೆಗೆ ತೆಗೆದುಕೊಳ್ಳುವುದು ಸರ್ಕಾರದ ಆಶಯ. ಕೆಲ ವಿಧೇಯಕಗಳ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ. ಪ್ರಮುಖ ಮಸೂದೆಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಲು ವೇಳಾಪಟ್ಟಿ ನಿಗದಿ ಮಾಡಿಕೊಳ್ಳಲು ಮತ್ತು ಅದನ್ನು ಕಲಾಪದ ಆರಂಭದ ದಿನವೇ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಅಗತ್ಯವಾದರೆ 2 ದಿನ ಕಲಾಪ ಮುಂದುವರಿಸಲೂ ನಿಶ್ಚಯಿಸಲಾಗಿದೆ.

ಎಪಿಎಂಸಿ, ಕಾರ್ವಿುಕ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾರಣ ಅದರ ಆಯಸ್ಸು 6 ತಿಂಗಳು ಮಾತ್ರ. ಈ ಅಧಿವೇಶನದಲ್ಲಿ ಅದಕ್ಕೆ ಒಪ್ಪಿಗೆ ಪಡೆಯುವುದು ಸರ್ಕಾರಕ್ಕೆ ಅನಿವಾರ್ಯ. ಆದರೆ, ಕರೊನಾ ನಿರ್ವಹಣೆಗಾಗಿ ಆರೋಗ್ಯ ಇಲಾಖೆ ಖರೀದಿಸಿದ ಉಪಕರಣ ವಿಚಾರ ಮುಂದಿಟ್ಟು ಮೊದಲ ದಿನದಿಂದಲೇ ಅಹೋರಾತ್ರಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಕಾಂಗ್ರೆಸ್ ಈಗಾಗಲೆ ನಿರ್ಧರಿಸಿದೆ.

ವೇಳಾಪಟ್ಟಿ ಪ್ರಕಟ

ವಿಧಾನಮಂಡಲದ ಮಳೆಗಾಲದ ಅಧಿವೇಶನಕ್ಕೆ ರಾಜ್ಯಪಾಲರು ಹಸಿರು ನಿಶಾನೆ ತೋರಿದ್ದು, ಸರ್ಕಾರ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿದೆ. ಸೆ.21 ರಿಂದ 30ರವರೆಗೆ ಅಧಿವೇಶನ ನಡೆಸಲು ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧರಿಸಿತ್ತು. 15ನೇ ವಿಧಾನಸಭೆಯ ಏಳನೇ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಪ್ರಕಟಿಸಲಾಗಿದೆ.

ಇಷ್ಟೊಂದು ಸಂಖ್ಯೆಗೆ ಕಾರಣ?

19 ಸುಗ್ರೀವಾಜ್ಞೆಗಳು ಒಂದೇ ಬಾರಿಗೆ ಶಾಸನ ಸಭೆಗೆ ಬರುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎನ್ನಲಾಗಿದೆ. ಬಜೆಟ್ ಕಲಾಪದ ಸಂದರ್ಭದಲ್ಲೇ ಕರೊನಾ ಕಾಣಿಸಿದ್ದರಿಂದ ಕೆಲ ವಿಧೇಯಕಗಳಿಗೆ ಮುಕ್ತಿ ಸಿಕ್ಕಿರಲಿಲ್ಲ. ಹೀಗಾಗಿ ಸಂಖ್ಯೆ ದೊಡ್ಡದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕೇಂದ್ರದ ಸೂಚನೆಯಂತೆ ಕೆಲವು ತುರ್ತು ನಿರ್ಧಾರ ಮಾಡಬೇಕಾಗಿದ್ದರಿಂದ, ಕೈಗಾರಿಕೆಗಳ ಅನುಕೂಲಕ್ಕೆ ಉದ್ಯೋಗ ಸೃಷ್ಟಿಯ ಅನಿವಾರ್ಯತೆ ಇದ್ದಿದ್ದರಿಂದ ವಿವಿಧ ಇಲಾಖೆಗೆ ಸಂಬಂಧಿಸಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಅಧಿವೇಶನ ನಡೆಯದಿದ್ದಾಗ ಸುಗ್ರೀವಾಜ್ಞೆ ಹೊರಡಿಸಲು ಅವಕಾಶವಿದೆ ಎನ್ನುತ್ತಾರೆ ಅಧಿಕಾರಿಗಳು.