ಜಿಲ್ಲೆ

34 ಕಾಮಗಾರಿಗೆ 30.69 ಲಕ್ಷ ರೂ. ವೆಚ್ಚ

ಬಾಲಮುರಳಿಕೃಷ್ಣ

ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಉದ್ಯೋಗ ಖಾತ್ರಿ ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನಾ ಸಭೆ ಸೋಮವಾರ ಇಲ್ಲಿನ ಗ್ರಾಪಂ ಆವರಣದಲ್ಲಿ ಅಧ್ಯಕ್ಷೆ ಸತ್ಯವತಿ ದೇವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸೋಮವಾರಪೇಟೆ ತಾಲೂಕು ಲೆಕ್ಕಪರಿಶೋಧನಾಧಿಕಾರಿ ಅಬ್ದುಲ್ ಸಲಾಂ, 2023-24ನೇ ಸಾಲಿನಲ್ಲಿ ದುಂಡಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಮತ್ತು 15ನೇ ಹಣಕಾಸು ಯೋಜನೆಯಡಿ ಆಗಿರುವ ಕಾಮಗಾರಿಗಳು ಮತ್ತು ಕಾಮಗಾರಿಗಳಿಗೆ ಖರ್ಚಾಗಿರುವ ಮೊತ್ತವನ್ನು ವರದಿ ಮೂಲಕ ಗ್ರಾಮಸ್ಥರ ಮುಂದಿಟ್ಟರು.


ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಹಣಕಾಸು ಯೋಜನೆಯಡಿ ಒಟ್ಟು 34 ಕಾಮಗಾರಿಗಳನ್ನು ನಡೆಸಲಾಗಿದ್ದು, ಇದಕ್ಕಾಗಿ 30,69,081 ರೂ. ವೆಚ್ಚ ಮಾಡಲಾಗಿದೆ.ಉದ್ಯೋಗ ಖಾತ್ರಿ ಯೋಜನೆಯ ವಿವಿಧ ಕಾಮಗಾರಿಗಳಿಗೆ 48,31,103 ರೂ.ವಿನಿಯೋಗಿಸಲಾಗಿದೆ ಎಂದು ಅಬ್ದುಲ್ ಸಲಾಂ ಮಾಹಿತಿ ನೀಡಿದರು.


ಸಭೆಯ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಾ.ಪಂ.ಯೋಜನಾಧಿಕಾರಿ ಎ.ಬಿ.ನವೀನ್ ಮಾತನಾಡಿ, ಪ್ರತಿ ಗ್ರಾ ಪಂ.ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಮತ್ತು 15ನೇ ಹಣಕಾಸು ಯೋಜನೆಯಡಿ ಆಗಿರುವ ನಾನಾ ಕಾಮಗಾರಿಗಳು ಹಾಗೂ ಕಾಮಗಾರಿಗಳಿಗೆ ವೆಚ್ಚವಾಗಿರುವುದನ್ನು ಗ್ರಾಮಸ್ಥರ ಮುಂದಿಡುವ ಉದ್ದೇಶದಿಂದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ನಡೆಸಲಾಗುತ್ತದೆ . ಈ ಸಭೆಯಲ್ಲಿ ಸಾರ್ವಜನಿಕರಿಗೆ ತಮ್ಮ ವ್ಯಾಪ್ತಿಯಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಅನುಮಾನಗಳಿದ್ದರೆ ನೇರವಾಗಿ ದೂರು ನೀಡಬಹುದು ಎಂದರು.


ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಇಂಜಿನಿಯರ್ ಕಾರ್ತಿಕ್, ಪಿಡಿಒ ಎಂ.ಕೆ.ಆಯಿಷ, ಗ್ರಾಪಂ ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ಪೂರ್ಣಿಮಾ ಕಿರಣ್, ನಿತಿನ್, ಸಿ.ಜೆ.ಗಿರೀಶ್, ನಂದಿನಿ ಇತರರಿದ್ದರು.