ತುಮಕೂರು: ವೀರಶೈವ, ಲಿಂಗಾಯತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜಿಲ್ಲೆಯ ಹಿರಿಯರು ಸೇರಿ ಐದು ಎಕರೆ ಜಾಗ ಖರೀದಿಸಿ, ಹಾಸ್ಟೆಲ್ ನಿಮಾರ್ಣಕ್ಕೆ ಮುಂದಾದರೆ ಸಕಲ ರೀತಿಯಲ್ಲಿಯೂ ನೆರವು ನೀಡುತ್ತೇನೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ನಗರದ ಗುರುಕುಲ ಹಾಸ್ಟೆಲ್ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಗುರುಕುಲ ಅರ್ಕೇಡ್ ಕಟ್ಟಡ ಉದ್ಘಾಟಿಸಿ ಮಾತನಾಡಿ, ತುಮಕೂರು ಬೆಳೆದಂತೆ ಭೂಮಿ ಬೆಲೆ ಗಗನಮುಖಿಯಾಗಿದೆ. ಭವಿಷ್ಯದ ದೃಷ್ಟಿಯಿಂದ ನೆರೆಯ ರಾಜ್ಯಗಳಿಂದ ಬಂದು, ಈ ಭಾಗಕ್ಕೆ ಬಂದು ಒಂದಕ್ಕೆ ಎರಡಷ್ಟು ರೇಟ್ ನೀಡಿ ಭೂಮಿ ಖರೀದಿಸುತ್ತಿದ್ದಾರೆ. ಹಾಗಾಗಿ ಭೂಮಿ ಸಿಗದಂತಾಗಿದೆ ಎಂದರು. ಸಮುದಾಯದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ವೀರಶೈವ ಸಮಾಜದ ಮುಖಂಡರು ನಗರದ ಸುತ್ತಮುತ್ತ ಐದು ಎಕರೆ ಜಾಗ ಖರೀದಿಸಿದರೆ ಅಲ್ಲಿ ಹಾಸ್ಟೆಲ್ ನಿರ್ಮಿಸಿ ಮತ್ತಷ್ಟು ಮಕ್ಕಳಿಗೆ ಆಶ್ರಯ ನೀಡಬಹುದು ಎಂದರು.
ಜಿಲ್ಲೆಯಲ್ಲಿ 25 ವರ್ಷಗಳಿಂದ ಜಿ.ಎಸ್.ಬಸವರಾಜು ಸಂಸದರಾಗಿ ಉದ್ದೇಶಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ನಾನು ಪೂರೈಸುತ್ತೇನೆ. ಈಗಾಗಲೇ ಸಾಕಷ್ಟು ರೈಲು ನೀಡಲಾಗಿದೆ. ಬಹುಜನರ ಕೋರಿಕೆಯಂತೆ ತುಮಕೂರು ಮೂಲಕ ಮಂಗಳೂರಿಗೆ ಟ್ರೈನ್ ಬಿಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಅವಶ್ಯಕತೆ ಕಂಡುಬಂದರೆ ಅದನ್ನು ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈಗಾಗಲೇ ತುಮಕೂರು ಮೂಲಕ ವಂದೇ ಭಾರತ್ ರೈಲಿನ ಜತೆಗೆ ಮೆಮು ರೈಲುಗಳ ಒಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು ಚಾಲನೆ ದೊರೆತಿದೆ. ನನೆಗುದಿಗೆ ಬಿದ್ದ ರೈಲ್ವೆ ಕೆಳ ಮತ್ತು ಮೇಲ್ಸೇತುವೆಗಳಿಗೆ ಚಾಲನೆ ದೊರೆತಿದ್ದು, ಮೂರು ವರ್ಷಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಗಲಿದೆ. ಕೈಗಾರಿಕೆಗಳು, ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾದಂತೆ, ತುಮಕೂರಿನ ಮೇಲೆ ಎಲ್ಲರ ಕಣ್ಣಿದೆ ಎಂದರು.
ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಗುರುಕುಲ ಹಾಸ್ಟೆಲ್ ಕಟ್ಟಡ ಉಳಿಸಿಕೊಳ್ಳಲು ಕಷ್ಟ ಪಟ್ಟಿದ್ದೇವೆ. ಸಂಸದರು, ಶಾಸಕರ ಅನುದಾನ ಸಹ ನೀಡಲಾಗಿದೆ. ಸಮಾಜದಲ್ಲಿ ಗುಂಪುಗಾರಿಕೆ ಕಡಿಮೆಯಾಗಬೇಕು. ಇಲ್ಲದಿದ್ದರೆ ಸಮಾಜಕ್ಕೆ ಉಳಿಗಾಲವಿಲ್ಲ. ಎಲ್ಲರೂ ಒಗ್ಗೂಡಿದರೆ ಸಮಾಜದ ಏಳಿಗೆಯಾಗಲಿದೆ. ಜಿಲ್ಲೆಗೆ ಹೇಮಾವತಿ ನೀರು ಬಂದ ಮೇಲೆ ಜಿಲ್ಲೆಯಲ್ಲಿ ಸಮುದಾಯ ಬೆಳೆದಿದೆ ಎಂದರು. ಸಮುದಾಯ ಕೇವಲ ಕೃಷಿ ನಂಬಿ ಕುಳಿತರೆ ಸಾಲದು ಕೈಗಾರಿಕೋದ್ಯಮಿಗಳಾಗಬೇಕು. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಬೇಕು. ದಿನೇದಿನೆ ಭೂಮಿ ಬೆಲೆ ಗಗನಕ್ಕೆರುತ್ತಿದೆ. ಹಾಗಾಗಿ ಭೂಮಿ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು. ವೀರಶೈವ ಗುರುಕುಲ ಹಾಸ್ಟೆಲ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ, ವೀರಶೈವ ಗುರುಕುಲ ಹಾಸ್ಟೆಲ್ ವತಿಯಿಂದ ಮೂರು ಹಾಸ್ಟೆಲ್ಗಳು ನಡೆಯುತ್ತಿದ್ದು, 200 ಹೆಣ್ಣುಮಕ್ಕಳು ಸೇರಿ 570 ಮಕ್ಕಳಿಗೆ ಆಶ್ರಯ ನೀಡಲಾಗಿದೆ. ಸರ್ಕಾರದ ಅನುದಾನವಿಲ್ಲದ ಕಾರಣ ದಾನಿಗಳ ನೆರವಿನಿಂದ ಸುಮಾರು 4.50 ಕೋಟಿ ವೆಚ್ಚ ಮಾಡಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು, ಇದರಿಂದ ಬಂದ ಆದಾಯದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
1945ರಲ್ಲಿ ಸರ್ಕಾರದಿಂದ ಮಂಜೂರಾಗಿದ್ದ 220/110 ಅಡಿ ಜಾಗದಲ್ಲಿ ಹಾಸ್ಟೆಲ್ ಹಾಗೂ ವಾಣಿಜ್ಯ ಕಟ್ಡಡ ನಿರ್ಮಿಸಲಾಗಿದೆ. ಸಮುದಾಯದ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಸುರ್ವಣ ಮಹೋತ್ಸವದ ನೆನಪಿಗಾಗಿ ಈ ಕಟ್ಟಡ ನಿಮಾರ್ಣವಾಗಿದೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಗುರುಕುಲ ಹಾಸ್ಟಲ್ ಸಮಿತಿ ಅಧ್ಯಕ್ಷ ಜಿ.ಎನ್.ಬಸವರಾಜು, ಉಪಾಧ್ಯಕ್ಷ ಎಂ.ಆರ್.ಸಿದ್ದಲಿಂಗಪ್ಪ, ಜಂಟಿ ಕಾರ್ಯದರ್ಶಿ ಎನ್. ಜಯಣ್ಣ, ಖಜಾಂಚಿ ಮಲ್ಲಿಕಾರ್ಜುನಯ್ಯ, ಮುಖಂಡ ಮಲ್ಲಿಕಾರ್ಜುನಯ್ಯ, ನಿರ್ದೇಶಕರಾದ ಪ್ರಭು ಸಾಗರನಹಳ್ಳಿ, ರೇಣುಕರಾಧ್ಯ, ಬಿ.ಬಿ.ಮಹದೇವಯ್ಯ, ಹಾಲೆನೂರು ಲೇಪಾಕ್ಷ, ಎಸ್.ಸಿದ್ದಪ್ಪ, ಕೆ.ಎಸ್.ವಿಶ್ವನಾಥಸ್ವಾಮಿ, ಇಂಜಿನಿಯರಿಂಗ್ ಮಲ್ಲೇಶಯ್ಯ, ವ್ಯವಸ್ಥಾಪಕ ಉಮಾಪತಿ , ತಿಪ್ಪೂರು ನಟರಾಜು ಮತ್ತಿತರರು ಇದ್ದರು.
ದೇವೇಗೌಡರು ಹೇಮಾವತಿ ನೀರಿಗೆ ಅಡ್ಡಿಪಡಿಸಿದಾಗ ಅವರ ಮಾತು ತಿರಸ್ಕರಿಸಿ ಜಿಲ್ಲೆಗೆ ಹೇಮಾವತಿ ನೀರು ಹರಿಸಲಾಯಿತು. ಜಿಲ್ಲೆಯ ನೀರಾವರಿ ಅಭಿವೃದ್ಧಿಯಲ್ಲಿ ನಮ್ಮ ಪಾಲಿದೆ, ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ಸಂಶೋಧಿಸಿದ ನೇತ್ರಾವತಿ ತಿರುವು ಯೋಜನೆಗೆ ಎತ್ತಿನಹೊಳೆ ಎಂದು ಹೆಸರಿಟ್ಟಿದ್ದಾರೆ. ಎತ್ತಿನಹೊಳೆಗೆ ಕಾಂಪೌಂಡ್ ಡ್ಯಾಂ ನಿಮಾರ್ಣ ಮಾಡಿದರೇ 25 ಟಿಎಂಸಿ ನೀರು ತುಂಬಿಸಬಹುದು. ಇದರಿಂದ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಾಗಲಿದೆ.| ಜಿ.ಎಸ್.ಬಸವರಾಜು ಮಾಜಿ ಸಂಸದ