ಕಲಬುರಗಿ: ನಗರದ ನಯಾಮೊಹಲ್ಲಾ ಹಜ್ ಕಮಿಟಿ ಪ್ರದೇಶದಿಂದ ೨೦೨೧ ಫೆ.೮ರಂದು ನಾಪತ್ತೆಯಾಗಿದ್ದ ಮಹಿಳೆ ನಜ್ಮಾ ಫಾತಿಮಾಯನ್ನು ನಗರದ ಸಿಸಿಬಿ ಪೊಲೀಸರು ಮೂರು ವರ್ಷ ಆರು ತಿಂಗಳ ನಂತರ ಪತ್ತೆ ಹಚ್ಚಿದ್ದಾರೆ. ೨೦೨೧ ಫೆ.೮ರಂದು ಮನೆಯಿಂದ ಹೋಗಿದ್ದ ನಜ್ಮಾ ಫಾತಿಮಾ ನಾಪತ್ತೆಯಾಗಿದ್ದಳು. ಈ ಕುರಿತು ಪತಿ ಅಹ್ಮದ್ ಅಲಿ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದರು. ಮುರು ವರ್ಷವಾದರೂ ಮಹಿಳೆ ಪತ್ತೆ ಆಗದಿರುವುದರಿಂದ ಪ್ರಕರಣವನ್ನು ಸಿಸಿಬಿ ಘಟಕ್ಕೆ ವಹಿಸಲಾಗಿರುತ್ತದೆ. ತನಿಖೆ ನಡೆಸಿದ ಸಿಸಿಬಿ ಪೊಲೀಸರು ಜೈಪುರ, ದೆಹಲಿ, ಹರಿಯಾಣ, ಹೈದರಾಬಾದ್ ನಗರಗಳಲ್ಲಿ ತಪಾಸಣೆ ನಡೆಸಲಾಗಿದೆ. ಈ ಮಹಿಳೆ ಕೆಲ ದಿನಗಳ ಹಿಂದೆ ದೆಹಲಿಯಿಂದ ಹೈದರಾಬಾದ್‌ಗೆ ಪ್ರವಾಸ ಮಾಡಿ, ವಾಸವಾಗಿರುವುದು ಪತ್ತೆ ಹಚ್ಚಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ದಿಲೀಪ ಸಾಗರ ನೇತೃತ್ವದಲ್ಲಿ ಸಿಬ್ಬಂದಿ ಪ್ರೀತಮ್, ಸುನೀಲಕುಮಾರ, ನಾಗರಾಜ, ಮಹೆಬೂಬ್ ಸಾಬ್ ಅವರ ತಂಡ ಮಹಿಳೆಯನ್ನು ಪತ್ತೆ ಮಾಡಿ, ತನಿಖೆ ನಡೆಸಿದೆ. ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಕಮೀಷನರ್ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.