ಮೈಸೂರು: ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸೇರಿ ಮೂರೂವರೆ ವರ್ಷಗಳಲ್ಲಿ 3 ಲಕ್ಷ ಕೋಟಿ ರೂ. ಸಾಲ ಮಾಡಿದ್ದು, ಇದುವೇ ಬಿಜೆಪಿ ಸರ್ಕಾರದ ದೊಡ್ಡ ಸಾಧನೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ ಮಂಡಿಸಿರುವ ರಾಜ್ಯ ಬಜೆಟ್ ಗಾತ್ರ 3.9 ಲಕ್ಷ ಕೋಟಿ ರೂ. ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ 5 ವರ್ಷದ ಆಡಳಿತದಲ್ಲಿ ಕೇವಲ 98 ಸಾವಿರ ಕೋಟಿ ರೂ. ಸಾಲ ಇತ್ತು. 1947 ರಿಂದ 2018 ರವರೆಗೆ ರಾಜ್ಯದಲ್ಲಿ ಒಟ್ಟಾರೆ ಸಾಲ 2.42 ಲಕ್ಷ ಕೋಟಿ ರೂ. ಇತ್ತು. ಬಿಜೆಪಿ ಸರ್ಕಾರ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಲ ಮಾಡಿ ದಾಖಲೆ ನಿರ್ಮಿಸಿದೆ. ಒಂದು ವರ್ಷಕ್ಕೆ ಬಡ್ಡಿಯನ್ನೇ 29 ಸಾವಿರ ಕೋಟಿ ರೂ. ಕೊಡಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಆರೋಪಿಸಿದರು.
ಕಳೆದ ಬಜೆಟ್‌ನಲ್ಲಿ ಸುಮಾರು 339 ಯೋಜನೆ ಅನುಷ್ಠಾನಗೊಳಿಸುವುದಾಗಿ ಭರವಸೆ ಕೊಡಲಾಗಿತ್ತು. ಈ ಪೈಕಿ ಅನುಷ್ಠಾನಕ್ಕೆ ಬಂದಿದ್ದು 207 ಮಾತ್ರ. ಇನ್ನೂ 132 ಕಾರ್ಯಕ್ರಮ ಜಾರಿಗೆ ಬಂದಿಲ್ಲ. ರೈತರಿಗಾಗಿ 112 ಭರವಸೆ ನೀಡಿದ್ದರು. ಈ ಪೈಕಿ 15 ಮಾತ್ರ ಈಡೇರಿದೆ. ನೇಕಾರರ ಅಭಿವೃದ್ಧಿಗೆ 1000 ಕೋಟಿ ರೂ. ಮೀಸಲಿಡಲಾಗಿತ್ತು. ಕೆಲಸ ಏನಾಯಿತೋ ಅಂತ ಗೊತ್ತಿಲ್ಲ. ಕಳೆದ ವರ್ಷ ಮಂಡಿಸಿದ ಬಜೆಟ್ ಒಟ್ಟು ಗಾತ್ರದಲ್ಲಿ ಶೇ.56ರಷ್ಟು ಮಾತ್ರ ಹಣ ಬಳಕೆಯಾಗಿದೆ. ಇನ್ನೂ ಸುಮಾರು 1.4 ಲಕ್ಷ ಕೋಟಿ ರೂ. ಏನಾಯಿತು? ಎಂದು ಪ್ರಶ್ನಿಸಿದರು.
ಮಹಿಳೆಯರಿಗೆ 26 ಭರವಸೆಗಳನ್ನು ನೀಡಿದ್ದರು. ಅದರಲ್ಲಿ 2 ಮಾತ್ರ ಈಡೇರಿವೆ. ಯುವಕರಿಗೆ 18 ಭರವಸೆ ಕೊಟ್ಟಿದ್ದರು, 1 ಮಾತ್ರ ಈಡೇರಿದೆ. ರಾಜ್ಯದಲ್ಲಿ ಸುಮಾರು 2.65 ಲಕ್ಷ ಹುದ್ದೆಗಳು ಖಾಲಿ ಇವೆ. ಅದನ್ನು ತುಂಬುವ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು.
ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ರಾಜ್ಯದಲ್ಲಿ 1036 ಕೊಲೆ, 21,365 ದರೊಡೆ, 3017 ಗುಂಪು ಘರ್ಷಣೆ ಮತ್ತು 15 ಜನ ಕೋಮುಗಲಭೆಯಲ್ಲಿ ಮೃತಪಟ್ಟಿದ್ದಾರೆ. ಇದುವೇ ಬಿಜೆಪಿ ಸಾಧನೆ ಎಂದು ಕಿಡಿಕಾರಿದರು.
ಪಿಎಸ್‌ಐ ಹಗರಣದಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಆಗ ಈ ಪ್ರಕರಣದಲ್ಲಿ ಯಾರು ಶಾಮೀಲು ಆಗಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಆಗ್ರಹಿಸಿದರು.
ಮೈಸೂರಿಗೆ ಏನು ಕೊಟ್ಟಿದ್ದೀರಿ? ಉಂಡವಾಡಿ ಕುಡಿಯುವ ನೀರು ಯೋಜನೆ, ಮೈಸೂರು ವಿಮಾನ ನಿಲ್ದಾಣ, ಪ್ರವಾಸೋದ್ಯಮ, ದಸರಾ ಪ್ರಾಧಿಕಾರ, ಕಳೆದ ಬಾರಿ 50 ಕೋಟಿ ರೂ. ವೆಚ್ಚದಲ್ಲಿ ಕಬಿನಿ ಉದ್ಯಾನ ಘೋಷಣೆ ಏನು ಆಯಿತು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಹುಸಿ ಭರವಸೆ ನೀಡಿರುವ ಬಿಜೆಪಿ ವಿರುದ್ಧ ಫೆ.19ರಿಂದ ‘ಕಿವಿ ಮೇಲೆ ಹೂ ಪೋಸ್ಟರ್ ’ ಅಭಿಯಾನ ನಗರದಲ್ಲಿ ನಡೆಯಲಿದೆ ಎಂದರು.
ನಗರದಲ್ಲಿ ಅಂಟಿಸಿರುವ ‘ಬಿಜೆಪಿ ಭರವಸೆ’ ಎಂಬ ಪೋಸ್ಟರ್‌ಗಳನ್ನು ಗುರುತು ಮಾಡುತ್ತಿದ್ದು, ನಾಳೆಯಿಂದ ಈ ಪೋಸ್ಟರ್ ಪಕ್ಕದಲ್ಲಿ ಕಿವಿ ಮೇಲೆ ಹೂ ಪೋಸ್ಟರ್ ಅಂಟಿಸಲಾಗುವುದು ಎಂದರು.
ತರ್ಪಣ ಬಿಟ್ಟು ಲೇವಡಿ !
ಶುಕ್ರವಾರ ಬಸವರಾಜ ಬೊಮ್ಮಾಯಿ ಮಂಡಿಸಿದ ಬಿಜೆಪಿ ಸರ್ಕಾರದ ಕೊನೆಯ ಬಜೆಟ್‌ಗೆ ಕಾಂಗ್ರೆಸ್ ಮುಖಂಡರು ತರ್ಪಣ ಬಿಟ್ಟು ಲೇವಡಿ ಮಾಡಿದರು. ತರ್ಪಣ ಬಿಟ್ಟು ಬೊಮ್ಮಾಯಿ ಬಜೆಟ್ ಗೋವಿಂದಾ ಗೋವಿಂದಾ ಎಂದು ವ್ಯಂಗ್ಯವಾಡಿದರು.
ಇವರ ಬಜೆಟ್ ಜಾರಿಗೆ ಬರೋದು ಏಪ್ರಿಲ್ 1ರ ನಂತರ. ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಇವರ ಬಜೆಟ್ ಕೇವಲ ನಾಮ್ ಕೇ ವಾಸ್ತೆಗೆ ಅಷ್ಟೆ. ಇದೊಂದು ಚುನಾವಣಾ ಪ್ರಣಾಳಿಕೆ ಘೋಷಣೆಯಷ್ಟೆ. ಕೊಟ್ಟಿರುವ ಯಾವುದೇ ಯೋಜನೆಗಳು ಅನುಷ್ಠಾನಕ್ಕೆ ಬರುವುದಿಲ್ಲ. ಹೀಗಾಗಿ ಇವರ ಬಜೆಟ್ ಕೇವಲ ಮತದಾರರ ಓಲೈಕೆ ಬಜೆಟ್ ಆಗಿದೆ ಎಂದು ಕಿಡಿಕಾರಿದರು.
ಜನರ ಕಿವಿಗೆ ಹೂವು ಇಟ್ಟು ಖಾಲಿ ಚೆಂಬು ಕೊಡುತ್ತಿದೆ ಎಂದು ಖಾಲಿ ಚೆಂಬು, ಕಿವಿಗೆ ದಾಸವಾಳ ಹೂವು ಇಟ್ಟುಕೊಂಡು ವಿನೂತನವಾಗಿ ರಾಜ್ಯ ಸರ್ಕಾರದ ಬಜೆಟ್ ಅನ್ನು ಕಾಂಗ್ರೆಸ್ ಮುಖಂಡರು ಟೀಕಿಸಿದರು.