ಜಿಲ್ಲೆ

3 ದಿನಕ್ಕೊಮ್ಮೆ ನೀರು ಕೊಡಿ

ಧಾರವಾಡ: 26 ಕೋಟಿ ರೂ. ವೆಚ್ಚದ 40 ಎಂಎಲ್​ಡಿ ಸಾಮರ್ಥ್ಯದ ನೂತನ ಜಲ ಶುದ್ಧೀಕರಣ ಘಟಕ ನಿರ್ಮಾಣ ಯೋಜನೆ ವಿಳಂಬವಾಗಿರುವುದು ಕರಾಳ ಇತಿಹಾಸ. 2- 3 ವರ್ಷ ವಿಳಂಬವಾದರೂ ಮಹತ್ವಾಕಾಂಕ್ಷಿ ಯೋಜನೆ ಉದ್ಘಾಟನೆಗೊಂಡಿದೆ. ಜಲಮಂಡಳಿ ಇನ್ನು ಮುಂದೆ ಕುಂಟು ನೆಪ ಹೇಳದೆ 3 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹು-ಧಾ ಮಹಾನಗರ ಪಾಲಿಕೆ ಠೇವಣಿ ಕೊಡುಗೆ ಕಾಮಗಾರಿ ಅಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಹು-ಧಾ ಮಹಾನಗರ ಪಾಲಿಕೆ ಆಶ್ರಯದಲ್ಲಿ ಸವದತ್ತಿ ಹಾಗೂ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ನಿರ್ವಿುಸಿರುವ 40 ಎಂಎಲ್​ಡಿ ಸಾಮರ್ಥ್ಯದ ನೂತನ ಜಲ ಶುದ್ಧೀಕರಣ ಘಟಕದ ಪಂಪ್ ಹೌಸ್ ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಯೋಜನೆಯ ಉದ್ದೇಶ ಈಡೇರಬೇ ಕಾದರೆ ಜನತೆಗೆ 3 ದಿನಕ್ಕೊಮ್ಮೆ ನೀರು ಸಿಗಬೇಕು. ನೀರು ಅಮೃತವಿದ್ದಂತೆ. ಜಗತ್ತಿನ 530 ಕೋಟಿ ಜನಸಂಖ್ಯೆ ಪೈಕಿ 220 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ನೀರನ್ನು ಮಿತವ್ಯಯದಿಂದ ಬಳಸಬೇಕು. ಈ ಬಗ್ಗೆ ಜನಜಾಗೃತಿ ಮೂಡಬೇಕು. ರಾಜ್ಯದ 6 ಕೋಟಿ ಜನಸಂಖ್ಯೆಗೆ ನೀರು ಪೂರೈಕೆ ಒಂದು ಸವಾಲು. ಸೃಷ್ಟಿಯನ್ನು ನಾಜೂಕಿನಿಂದ ಬಳಸಿ ಉಳಿಸಿ ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಧಾನಿ ಮೋದಿಯವರು 2024ರ ವೇಳೆಗೆ ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸುವ ‘ಹರ್ ಘರ್ ನಲ್ ಜಲ್’ ಯೋಜನೆಗೆ 3.5 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದಾರೆ. ಎಲ್ಲ ರಾಜ್ಯಗಳು ಈ ಯೋಜನೆಯ ಯಶಸ್ಸಿಗೆ ಸಹಕಾರ ನೀಡುವ ನಿರೀಕ್ಷೆ ಇದೆ ಎಂದರು.

ಜಲ ಶುದ್ಧೀಕರಣ ಘಟಕ ಉದ್ಘಾಟಿ ಸಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಅವಳಿನಗರಕ್ಕೆ ಈ ಮೊದಲು 10- 12 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ನೀರಿನ ಸಮಸ್ಯೆಗೆ ಪರಿಹಾರವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಹಿಂದಿನ ಸರ್ಕಾರ ಯೋಜನೆಗೆ ಅನುಮತಿ ನೀಡಲು ವಿಳಂಬ ಮಾಡಿತ್ತು. ಅಂತೂ ಮಹತ್ವಾಕಾಂಕ್ಷಿ ಯೋಜನೆ ಲೋಕಾರ್ಪಣೆಗೊಂಡಿದೆ. ಇನ್ನು 2-3 ವರ್ಷಗಳಲ್ಲಿ ಅವಳಿನಗರದ ಎಲ್ಲ ವಾರ್ಡ್​ಗಳಿಗೆ ನಿರಂತರ ನೀರು ಪೂರೈಕೆಯಾಗಲಿದೆ ಎಂದರು.

ಉದ್ಯೋಗ ನೀಡಿ: ಜಲ ಶುದ್ಧೀಕರಣ ಘಟಕ ನಿರ್ವಣಕ್ಕೆ ಅಮ್ಮಿನಭಾವಿ ಹಾಗೂ ಮರೇವಾಡ ಗ್ರಾಮಗಳ ರೈತರು ಜಮೀನು ನೀಡಿದ್ದಾರೆ. ಅಂಥ ರೈತ ಕುಟುಂಬದವರಿಗೆ ಘಟಕದಲ್ಲಿ ವಿವಿಧ ಉದ್ಯೋಗಗಳಿಗೆ ಕಡ್ಡಾಯವಾಗಿ ಆದ್ಯತೆ ನೀಡಬೇಕು ಎಂದು ಗ್ರಾಮೀಣ ಶಾಸಕ ಅಮೃತ ದೇಸಾಯಿ ವಿನಂತಿಸಿದರು.

ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ದೀಪಾ ಚೋಳನ್, ಮಾಜಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಮಾಜಿ ಸದಸ್ಯರಾದ ಶಿವು ಮೆಣಸಿನಕಾಯಿ, ಮಲ್ಲಿಕಾರ್ಜುನ ಹೊರಕೇರಿ, ಡಿ.ಕೆ. ಚವ್ಹಾಣ, ಶಿವು ಹಿರೇಮಠ, ನಿವೃತ್ತ ಮುಖ್ಯ ಇಂಜಿನಿಯರ್ ರಾಜು, ಇತರರಿದ್ದರು. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಸ್ವಾಗತಿಸಿದರು. ಮುಖ್ಯ ಇಂಜಿನಿಯರ್ ಎ.ಸಿ. ಚಾಮರಾಜೇಗೌಡ ಮಾತನಾಡಿದರು. ಕಾರ್ಯಪಾಲಕ ಇಂಜಿನಿಯರ್ ಅಶೋಕ ಮಾಡ್ಯಾಳ ವಂದಿಸಿದರು.</